Monday, April 8, 2019

ಪ್ರಸಾದ.. ದೇವಸ್ಥಾನ.. ರಾಜನೊಡನೆ ಸವಿ ನೆನಪು

"ಲೋ ಲೋ  ರಾಜ.. ಎಲ್ಲಿದ್ದೀಯೋ.. "

ನನ್ನ ಅವನ ಸಂಭಾಷಣೆ ಶುರುವಾಗುತ್ತಿದ್ದದ್ದೇ ಹಾಗೆ.. ಮಾವ ಅನ್ನುವ ಗೌರವ ಮನದೊಳಗೆ .. ಸ್ನೇಹಿತ ಅನ್ನುವ ಗತ್ತು ಹೊರಗೆ.. 

"ಕಪಾಳಕ್ಕೆ ಹಾಕ್ತೀನಿ.. ಬರ್ತೀನಿ ಅಂತ ಹೇಳಿದ್ದೆ ಅಲ್ವೇನೋ.. ಬರ್ತಾ ಇದ್ದೀನಿ.. ಈ ಟ್ರಾಫಿಕ್ ನಲ್ಲಿ ನಿನ್ನ ಕರೆ ಬಿಡು.. ಫೋನ್ ಇದೋ ಬೇಕೂಫ"

ಆಗ ಇಬ್ಬರಿಗೂ ಸಮಾಧಾನ.. 

ಮದುವೆಯಾದ ದಿನಗಳಲ್ಲಿ ಸವಿತಾ ಬಯ್ತಾ ಇರೋಳು.. "ರೀ ಮಾವನನ್ನು ಮಾವ ಅನ್ನೋಕೆ ಏನು ಕಾಯಿಲೆ ನಿಮಗೆ.. "

"ನಗೆ ಗೊತ್ತಿಲ್ಲ ಕಣೆ.. ನಂದು ಅವನದು ಬಂಧವೇ ಹಾಗೆ.. ಏನ್ಲ ಮಗ"  ಅಂತ ರಾಜನ ಕಡೆಗೆ ತಿರುಗಿದರೆ.. ಅವನ ಸ್ಪೆಷಲ್ ತೂಗುದೀಪ ಶ್ರೀನಿವಾಸ್ ನಗು ಹೊರಗೆ ಬರುತಿತ್ತು.. ಸವಿತಾ ನನ್ನ ತಲೆಗೆ ಒಂದು ಬಿಡ್ತಾ ಇದ್ಲು.. 

ಒಮ್ಮೆ ಶನಿವಾರ ಮನೆಗೆ ಬಂದ.. ಸವಿತಾ .. ರೀ ದೇವಸ್ಥಾನಕ್ಕೆ ಹೋಗೋಣ ಬನ್ನಿ ಅಂದ್ಲು.. ಮನೆಯ ಹತ್ತಿರವೇ ಇದ್ದ ಶನಿದೇವರ ಗುಡಿಗೆ ಹೋದೆವು.. 

ಯಥಾಪ್ರಕಾರ.. ನಮಸ್ಕಾರ, ತೀರ್ಥ, ಪ್ರಸಾದ ಎಲ್ಲವೂ ಸಿಕ್ಕಿತು.. ತು .. ಗುಡಿಯ ಮೆಟ್ಟಿಲಮೇಲೆ ಕೂತು ಸುಮ್ಮನೆ ತಿನ್ನುತ್ತಾ ಇದ್ದಾಗ.. 

"ಶ್ರೀಕಾಂತಾ ಹೇಗಿದೆಯೋ ಪ್ರಸಾದ"

"ಚೆನ್ನಾಗಿದೆ ಕಣೋ ರಾಜ.. ಸ್ವಲ್ಪ ಒಗ್ಗರಣೆ ಬೀಳಬೇಕಿತ್ತು.. ರುಚಿ ಸೊಗಸಾಗಿರೋದು. "

ತಿನ್ನುತ್ತಿದ್ದ ಕೈಯಿಂದಲೇ … ಪೈಡ್ ಅಂತ ತಲೆಗೆ ಕೊಟ್ಟಳು ಸವಿತಾ.. 

"ಯಾಕೆ ಏನಾಯಿತೆ?" ಅಂತ ತುಸು ಜೋರಾಗಿಯೇ ಕೇಳಿದೆ.. ಏಟು ಸರಿಯಾಗಿ ಬಿದ್ದಿತ್ತು.. !

"ನಿಮ್ ತಲೆ ಇದು..ಸಿಹಿ ಪೊಂಗಲ್.. ಇದಕ್ಕೆ ಯಾವ ಮಂಗಾ ಒಗ್ಗರಣೆ ಹಾಕ್ತಾನೆ.. ತಲೆ ಬೇಡ್ವಾ ನಿಮಗೆ.. !"

ಕೋಪದಿಂದ ಕುಡಿಯುತ್ತಲೇ ಇದ್ದಳು.. 

ನಾ ಜೋರಾಗಿ ನಕ್ಕೆ.. ರಾಜ ಅದು ದೇವಸ್ಥಾನ ಎನ್ನುವುದನ್ನು ಮರೆತು.. ನಗು ತೂಗುದೀಪ ಶ್ರೀನಿವಾಸ್ ಶೈಲಿಯಲ್ಲಿ ಜೋರಾಗಿ ನಕ್ಕೆ ಬಿಟ್ಟ.. 

"ಹಾಕು ಇನ್ನೊಂದು.. ಬರಿ ತರ್ಲೆ ಮಾಡ್ತಾನೆ.. ಪ್ರಸಾದ ಅಂತ ಗೊತ್ತಿಲ್ಲವೇನೋ ಬೇಕೂಫ.. ಒಗ್ಗರಣೆ ಅಂತೆ ಒಗ್ಗರಣೆ" ಅವನೊಂದು ಬಿಟ್ಟಾ.. 

ಒಂದು ಮಾತಿಗೆ ಎರಡು ಏಟು.. ಯಾವ ಪುರುಷಾರ್ಥಕ್ಕೆ ಈ ಮಾತು ಹೇಳಿದೆ ಅಂತ ಆ ಕ್ಷಣಕ್ಕೆ ಅನ್ನಿಸಿದರೂ.. ದೇವಸ್ಥಾನದ ಪ್ರಸಾದ ಸಿಕ್ಕಾಗೆಲ್ಲ.. ರಾಜ ನಮ್ಮ ಜೊತೆ ಇದ್ದಾಗೆಲ್ಲ (ಆ ನನ್ಮಗ ಯಾವಾಗಲೂ ನಮ್ಮ ಮನದಲ್ಲಿಯೇ ಇರ್ತಾನೆ) ಇದೆ ಮಾತುಗಳನ್ನು ಹೇಳಿ ಹೇಳಿ ನಗುತ್ತಿದ್ದೆವು.. 

ಸವಿತಾ ಅವನ ಮಾತಿಗೆ ತಾಳ ಹಾಕುತ್ತಿದ್ದದ್ದು, ಅವನು ಸಂಬಂಧಿಕರ ಬೇರುಗಳನ್ನೂ ಹುಡುಕಿ ಅವರು ಹೀಗೆ ಇವರು ಹೀಗೆ ಅಂತ ಬಂಧಗಳನ್ನು ಹೆಣೆಯುತ್ತಿದ್ದಾರೆ.. ಸವಿತಾ ಅದಕ್ಕೆ ಇನ್ನಷ್ಟು ಸೇರಿಸಿ ಬಂಧವನ್ನು ತನ್ನ ಹತ್ತಿರಕ್ಕೆ ಸೆಳೆದುಕೊಂಡು ಬಿಡುತ್ತಿದ್ದಳು.. 

ಅದಕ್ಕೆ ಸವಿತಾಗೆ ಯಾವಾಗಲೂ ರೇಗಿಸ್ತಾ ಇರ್ತಿದ್ದೆ..ಶ್ರೀ ಅಬ್ದುಲ್ ಕಲಾಂ ಸಾಹೇಬ್ರು ಜನಿವಾರ ಹಾಕಿಕೊಂಡಿದ್ದರೇ ಅವರನ್ನು ತನ್ನ ಸಂಬಂಧಿಗಳ ವೃತ್ತಕ್ಕೆ ಎಳೆದು ತರುತ್ತಿದ್ದಳು ಅಂತ.. 

ಹೌದು ಗೆಳೆತನ, ನೆಂಟಸ್ಥನ, ಕುಟುಂಬ ವೃಕ್ಷ.. ಇದೆಲ್ಲವನ್ನು ಸವಿವರವಾಗಿ ಬಿಡಿಸಿ ಇವರು ಇವರಿಗೆ ಹೀಗೆ ಬಂಧುಗಳು.. ಎನ್ನುವುದನ್ನು ಕರಾರುವಕ್ಕಾಗಿ ಹೇಳುತ್ತಿದ್ದದ್ದು ಸವಿತಾಳ ಸ್ಪೆಷಾಲಿಟಿ.. ಅದಕ್ಕೆ ತಕ್ಕಂತೆ.. ಇವನು ರಾಜ.. ಇಬ್ಬರಿಗೂ ಸಮಾನ ಬಂಧುಗಳು ಇದ್ದದ್ದು ನನಗೆ ತಲೆನೋವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದದ್ದು ಸುಳ್ಳಲ್ಲ.. 

ಸ್ವರ್ಗದಲ್ಲಿರುವ ಅವರಿಬ್ಬರೂ, ತಮ್ಮ ಬಂಧುಮಿತ್ರರೊಡನೆ ವಂಶವೃಕ್ಷವನ್ನು ಹರಡಿಕೊಂಡು ಚರ್ಚಿಸುತ್ತಾಳೆ ಇರುತ್ತಾರೆ.. 

ಇಂದು ಸವಿತಾ ಮತ್ತು ನಾನು ಸಪ್ತಪದಿ ತುಳಿದು ೧೭ ವಸಂತಗಳು ಆಯಿತು.. ಭೌತಿಕವಾಗಿ ಅವಳಿಲ್ಲ ಆದರೆ.. ಅವಳನ್ನು ನೆನೆಯದೆ ಒಂದು ಕ್ಷಣವೂ ಇಲ್ಲ.. ನನ್ನ ಮತ್ತು ಶೀತಲ್ ಆಡುವ ಪ್ರತಿ ಮಾತುಗಳಲ್ಲಿ ಅವಳಿದ್ದಾಳೆ.. ಅವಳು ಉಸಿರಾಡುತ್ತಾಳೆ.. 

ರಾಜ.. ಅವನ ಹೆಸರಿಗೆ ತಕ್ಕಂತೆ ರಾಜನೇ ಅವನು.. ಜಗತ್ತು ತನ್ನ ಬಗ್ಗೆ ಏನೇ ಹೇಳಲಿ.. ಆನೆ ನೆಡೆದದ್ದೇ ದಾರಿ ಎನ್ನುವ ಜಾಯಮಾನದವನು.. ಯಾರಿಗೂ ತಲೆ ಬಾಗಿಸುತ್ತಿರಲಿಲ್ಲ.. ತಲೆ ಬಾಗಿಸುವ ಕೆಲಸವನ್ನು ಮಾಡುತ್ತಿರಲಿಲ್ಲ.. ರಾಜ ಅಂದರೆ ರಾಜನೇ.. ಅವನಿಲ್ಲದ ಹನ್ನೊಂದು ವರ್ಷಗಳು ಕಳೆದರು.. ನಮ್ಮ ಮನೆಯಲ್ಲಿ ಅವನ ಮಾತಿಲ್ಲದೆ ದಿನವಿಲ್ಲ .. ಯಾವುದೋ ಒಂದು ನೆಪದಲ್ಲಿ ಅವನು ಇದ್ದೆ ಇರುತ್ತಾನೆ.. ಇಂದು ಅವನ ಜನುಮದಿನ.. ಅವನ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತದೆ.. 

ರಾಜ ನೀ ಅಜರಾಮರ.. !!!

ಸವಿತಾ ಹೊಸ ಬಾಳಿಗೆ ನೀ ಜೊತೆಯಾಗಿದ್ದೆ ಅಂದು.. 
ಸವಿ ಸವಿ ನೆನಪಲ್ಲಿ ಬದುಕು ಸಾಗಿಸುತ್ತಿರುವೆ ಇಂದು.. 

ಒಂದಷ್ಟು ನೆನಪು ಚಿತ್ರಗಳಲ್ಲಿ!!!


ನನ್ನ ಬಾಳಿಗೆ ಭಗವಂತ ಕೊಟ್ಟ ಅಂಕ 





ಮಕ್ಕಳೆಂದರೆ ರಾಜನಿಗೆ.. ರಾಜ ಎಂದರೆ ಮಕ್ಕಳಿಗೆ ಪ್ರಾಣ 
ನಮ್ಮ ಹತ್ತನೇ ವಾರ್ಷಿಕೋತ್ಸವ…  ಘಾಟಿ ಸುಬ್ರಮಣ್ಯ 


Sunday, December 23, 2018

ಶಂಖ ಪರಿವಾರದ ಜೊತೆ ಒಂದು ದಿನ

ತೂಗುದೀಪ ಶ್ರೀನಿವಾಸ್ ಮಾದರಿಯಲ್ಲಿ ಗಹಗಹಿಸಿ ನಗುತ್ತಿದ್ದ ಸದ್ದು ಅಲ್ಲೆಲ್ಲಾ ಪ್ರತಿಧ್ವನಿಸಿತ್ತು.. ಹತ್ತು ವರ್ಷಗಳಿಂದ ಈ ಸದ್ದು ಕೇಳಿ ಅಭ್ಯಾಸವಾಗಿದ್ದ ಈ ನಗುವಿನ ಅಲೆಯ ಹಿಂದೆ ಇದ್ದ ವ್ಯಕ್ತಿ ಯಾರು ಎನ್ನುವುದು ಗೊತ್ತಿತ್ತು.. ಎಲ್ಲರೂ ಇವನ ಕಡೆ ನೋಡಿ ಒಂದು ನಗೆ ಬೀರಿದರು..

"ಏನೋ ರಾಜ.. ಬಹಳ ಖುಷಿಯಾಗಿದ್ದೀಯ.. ಏನು ಸಮಾಚಾರ" ಅಲ್ಲಿದ್ದ ಒಬ್ಬ ಕೇಳಿದ

"ಇವತ್ತು ನನ್ನ ಕುಟುಂಬ ವೃಕ್ಷದ ಕೆಲವು ಕೊಂಬೆಗಳನ್ನು ನೋಡಬಹುದು ಅಂತ ಖುಷಿ"

"ಹೌದಾ.. ಸರಿ ನೀ ಹೋಗಿ ಬಾ.. ನಿನ್ನ ಕತೆ ಕೇಳಲು ನಾ ಇಲ್ಲಿಯೇ ಕಾಯುತ್ತಿರುವೆ.. " ಎಂದು ಹೇಳಿ ಆ ವ್ಯಕ್ತಿ ನೆಡೆಯುತ್ತ ಹೋಗಿ ಆ ತಿರುವಿನಲ್ಲಿ ಮರೆಯಾದ..

*****

ಉತ್ಸುಕತೆಯಿಂದ ಕಾಯುತ್ತಿದ್ದವ.. ಅರಳಿಕಟ್ಟೆಯಲ್ಲಿ ಕೂತಿದ್ದ.. 

ಹಣೆಯಲ್ಲಿ ಢಾಳಾದ ವಿಭೂತಿ.. ಅದರ ಮಧ್ಯೆ ಕುಂಕುಮ, ಬಿಳಿ ಪಂಚೆ, ಶಲ್ಯ ಹೊದ್ದು.. ಮೊಗದ ಮೇಲೆ ದೇಶಾವರಿ ನಗೆ ಬೀರುತ್ತಾ ರಾಜ ಬಂದ.. 

"ಹೇಗಿತ್ತಪ್ಪ ನಿನ್ನ ಭೂಲೋಕ ಪಯಣ.. ಅದರ ಬಗ್ಗೆ ಹೇಳು ಮಾರಾಯ.. !"

"ನನ್ನ ಕುಟುಂಬದ ವೃಕ್ಷ ಹರಡಿರುವ ರೀತಿ ಖುಷಿಯಾಗುತ್ತಿದೆ.. ಕರುನಾಡಿನಿಂದ.. ದಾಟಿ ಸಪ್ತಸಾಗರದಾಚೆಗೆ ಹಬ್ಬಿರುವ ರೀತಿ ಖುಷಿ ಕೊಟ್ಟಿದೆ.. ನನ್ನ ಮಕ್ಕಳ ಸಾಧನೆ.. ಅವರ ಮಕ್ಕಳ ಆ ತುಂಟತನ ನೋಡುವುದೇ ಖುಷಿ.. ಚಿಕ್ಕಪ್ಪ ಚಿಕ್ಕಪ್ಪ ಎನ್ನುವ ಮೀರಾ, ಮಂಜು, ಗಿರಿ, ಸುಮ, ಸಂಧ್ಯಾ, ಲಕ್ಷ್ಮಿ, ವಿದ್ಯಾ.. ಮಾವ ಎನ್ನುವ ನಾಗೇಂದ್ರ, ಲಕ್ಷ್ಮಿ..   ಮಸ್ತ್ ಮಸ್ತ್.. 

ಹೋಮ ಕಾರ್ಯ ಸೊಗಸಾಗಿತ್ತು.. ಬೆಳಗ್ಗೆ ಬೇಗನೆ ಶುರುವಾಗಿದ್ದರಿಂದ ಹೆಚ್ಚು ಮಂದಿ ಬಂದಿರಲಿಲ್ಲ.. ಭಾನುವಾರ ಅಲ್ಲವೇ.. ಎಲ್ಲರೂ ತಡವಾಗಿ ಎದ್ದು ಬರುವವರಿದ್ದರೂ ಅನ್ಕೊಂಡು ನಾ ಎಲ್ಲರನ್ನು ನೋಡಲು ಕಾಯುತ್ತಾ ಕೂತಿದ್ದೆ.. ಹೋಮ ಹವನಾದಿಗಳು ನೆಡೆದಿದ್ದವು.. ಮಂತ್ರಘೋಷಗಳು ನನಗೆ ಬಲು ಇಷ್ಟ.. ಅಲ್ಲಿಯೇ ಹತ್ತಿರದಲ್ಲಿ ಕೂತಿದ್ದೆ.. ಪುರೋಹಿತರ ಜೊತೆಯಲ್ಲಿ ನನಗೆ ಬರುತ್ತಿದ್ದ ಅಲ್ಪ ಸ್ವಲ್ಪ ಮಂತ್ರಗಳನ್ನು ಹೇಳುತ್ತಿದ್ದೆ.. ಏನೋ ಒಂದು ರೀತಿ ಮನಸ್ಸಿಗೆ ಖುಷಿ ನೀಡಿತ್ತು... 

ಹತ್ತುಘಂಟೆ ಕಳೆದಿತ್ತು.. ಒಬ್ಬೊಬ್ಬರಾಗಿ ಬರಲು ಶುರು ಮಾಡಿದರು.. ಮೀರಾಳ ಮದುವೆಗೆ ಮಾತ್ರ ನಾ ಇದ್ದೆ..ಆಮೇಲೆ ನೆಡೆದ ಮದುವೆಗಳನ್ನೆಲ್ಲ ಇಲ್ಲಿಂದಲೇ ನೋಡಿದ್ದು.. ಎಲ್ಲಾ ಜೋಡಿಗಳನ್ನು ನೋಡಿ ಮನಸ್ಸಿಗೆ ಸಂತೋಷವಾಗಿತ್ತು.. 

ಮೀರಾ-ಕುಮಾರ ಕುಟುಂಬ.. ಅವರ ಮುದ್ದು ಮಕ್ಕಳು.. 
ಸುಮಾ-ರಾಘವೇಂದ್ರ-ಮಗು ಮುದ್ದಾದ ಕುಟುಂಬ 
ಲಕ್ಷ್ಮಿ-ಯೋಗಾನಂದ್-ಅವರ ಮುದ್ದಾದ ಮಕ್ಕಳು 
ಗಿರಿ ಒಬ್ಬನೇ ಬಂದಿದ್ದರೂ, ಮುದ್ದಾದ ಮಗು ಮತ್ತು ಮಡದಿಯ ಬಗ್ಗೆ ಅವನ ಮಾತುಗಳು ಇಷ್ಟವಾದವು 
ಮಂಜು-ಸುಮಾ ಮತ್ತು ಆ ಛೋಟಾ ಪುಟಾಣಿ.. 
ನಾಗಲಕ್ಷ್ಮಿ ಮತ್ತು ಮಗು ಸುಂದರ.. ನಾಗೇಶ್ ಬಂದಿರಲಿಲ್ಲ..  
ಸಂಧ್ಯಾ-ಹನುಮೇಶ್ ಸುಂದರ ಜೋಡಿ 
ಕಾರ್ಯಕ್ರಮಕ್ಕೆ ಬರಲಿಲ್ಲವಾದರೂ ವಿದ್ಯಾಳನ್ನೇ ಹೋಲುತ್ತಿದ್ದ ಒಬ್ಬಳು ಅಲ್ಲಿ ಓಡಾಡುತ್ತಿದಳು .. ವಿದ್ಯಾ-ಅರವಿಂದ್ ಜೋಡಿ ಮನೇಲೆ ಇದ್ದರು ಎಂದು ಲಕ್ಷ್ಮಿಯಿಂದ ತಿಳಿಯಿತು.. 
ನಾಗೇಂದ್ರ ಒಬ್ಬನೇ ಬಂದಿದ್ದ.. ಮಗುವಿನ ಬಗ್ಗೆ ಹೇಳಿದ್ದು.. ತನ್ನ ಮಡದಿಯ ಬಗ್ಗೆ ಹೇಳಿದ್ದು ಕೇಳಿದೆ.. 

ಇವರನ್ನೆಲ್ಲಾ ಒಂದೇ ಫ್ರೇಮಿನಲ್ಲಿ ನೋಡಿದ್ದು ಸೂಪರ್ ಇತ್ತು.. 

ಈ ಕಾರ್ಯಕ್ರಮ ನೆಡೆದ ಸ್ಥಳವೂ ಸುಂದರವಾಗಿತ್ತು.. ವಿಶಾಲವಾದ ದೇವಸ್ಥಾನ.. ಓಡಾಡಲು ಬೇಕಾದಷ್ಟು ಜಾಗ.. ಒಂದು ರೀತಿಯಲ್ಲಿ ಆಧುನಿಕತೆಯ ಸೋಗು ಇಲ್ಲದೆ ಇದ್ದರೇ ಹಳ್ಳಿವಾತಾವರಣದಂತೆ ಇದ್ದ ಜಾಗ.. ಅಲ್ಲಿನ ತಾಣವನ್ನು ಒಮ್ಮೆ ನೋಡು.. !!!

ವಿಶಾಲವಾದ ದೇವಾಲಯ 

ಆದಿ ಪೂಜಿತ ಗಣಪ 

ಬೃಹತ್ ರಾಜಗೋಪುರ 

ನಾಗರಕಟ್ಟೆ 

ನನ್ನ ಕುಟುಂಬದಂತೆ ಅರಳಿರುವ ಅಶ್ವಥ್ ವೃಕ್ಷ 

ಅಲ್ಲೊಂದು ಕಲಿಕಾ ಕೇಂದ್ರ

ಗರುಡ ಕಂಬ.. 

ಹೀಗೊಂದು ನೋಟ 
ಅಕ್ಷರಾಭ್ಯಾಸ, ಸತ್ಯನಾರಾಯಣ ಪೂಜೆ ಸಾಂಗೋಪಾಂಗವಾಗಿ ನೆರವೇರಿತು.. ಈ ಕಾರ್ಯಕ್ರಮಗಳೆಲ್ಲ ಕೌಟುಂಬಿಕ ಮಿಲನ ಅಲ್ಲವೇ.. ಬಂದವರೆಲ್ಲ ಬಂಧು ಮಿತ್ರರಜೊತೆಯಲ್ಲಿ ಮಾತು ಮಾತು ಮಾತು.. 

ಬೆಳಗಿನ  ಉಪಹಾರ ರುಚಿಯಾಗಿತ್ತು.. ಊಟ ಭರ್ಜರಿ.. ಎಲ್ಲರೂ ತಾಂಬೂಲ ಪಡೆದು ಹೊರಟಾಗ ಮನಸ್ಸು ಭಾರವಾಗಿತ್ತು.. ಕೆಲವರ ಚಿತ್ರಗಳು ಸಿಕ್ಕಿದವು.. ಕೆಲವರು ಹೊರತು ಬಿಟ್ಟಿದ್ದರು.. ಆದರೂ ಅವರನ್ನೆಲ್ಲ ಒಂದೇ ಕಡೆ ನೋಡಿದ್ದು ಖುಷಿಯಾಗಿತ್ತು.. ಅವರನ್ನೆಲ್ಲ ಮಾತಾಡಿಸಲು ಸಾಧ್ಯವಾಗಲಿಲ್ಲ.. ಆದರೆ ಎಲ್ಲರ ಮನಸ್ಸಿನಲ್ಲಿ ನಾ ಇದ್ದೆ ಎನ್ನುವುದು ನನಗೆ ಗೊತ್ತಿತ್ತು.. 

ಶ್ರೀಕಾಂತ ಮನಸ್ಸಿನಲ್ಲಿ ಅಂದುಕೊಂಡ.. "ರಾಜಾ ಇಲ್ಲಿ ಇದ್ದಿದ್ರೆ.. .. ಛೆ ಎಂಥ ಮಾತು.. ರಾಜಾ ನಮ್ಮೊಳಗೇ ಇದ್ದಾನೆ.. ಅವನು ಎಲ್ಲೂ ಹೋಗಿಲ್ಲ" ಅಂದಾಗ ಮನಸ್ಸಿಗೆ ನೆಮ್ಮದಿ.. 

ನೋಡಪ್ಪ.. ಒಂದಷ್ಟು ಚಿತ್ರಗಳನ್ನು ಕ್ಲಿಕ್ ಮಾಡಿ ನಿನಗೋಸ್ಕರ ತಂದಿದ್ದೇನೆ.. ನೋಡು ಎನ್ನುತ್ತಾ 9886155232 ನಂಬರ್ ಇರುವ ಮೊಬೈಲಿನಲ್ಲಿ ಚಿತ್ರಗಳನ್ನು ತೋರಿಸುತ್ತಾ ಹೋದ.. ಆ ಚಿತ್ರಗಳು ನಿಮಗಾಗಿ ಇಲ್ಲಿವೆ.. 



















ಎಲ್ಲಾ ಚಿತ್ರಗಳನ್ನು ನೋಡಿ ಇಬ್ಬರೂ ಮತ್ತೊಮ್ಮೆ ಸಂತೋಷ ಪಟ್ಟರು.. ರಾಜ ನಿನ್ನ ಭೂಲೋಕ ಪಯಣ ಸೂಪರ್ ಕಣೋ.. ಈ ರೀತಿಯ ಪಯಣ ನೆಡೆಯುತ್ತಲೇ ಇರಲಿ.. ಹಾಗೆ ನಿನ್ನ ಕುಟುಂಬದಲ್ಲಿ ಈ ರೀತಿಯ ಸಂಭ್ರಮದ ಕಾರ್ಯಕ್ರಮಗಳು ಆಗುತ್ತಲೇ ಇರಲಿ.. ಶುಭವಾಗಲಿ.. !!!

ಹಾಗೆ ಇಬ್ಬರೂ ನೆಡೆಯುತ್ತಾ ನೆಡೆಯುತ್ತಾ ತಿರುವಿನಲ್ಲಿ ಚುಕ್ಕೆಯಾಗಿ ಗಗನದಲ್ಲಿ ತಾರೆಗಳಾದರು.. !!!

Sunday, April 8, 2018

ಮೈ ನೇಮ್ ಈಸ್ ರಾಜ್ ರಾಜ್ ರಾಜ

ಸುಮಾರು ಹನ್ನೆರಡು ವರ್ಷದ ಹಿಂದೆ.. ಉದಯ ಟಿವಿಯಲ್ಲಿ ಮೈತ್ರಿ ಎನ್ನುವ ನಿರೂಪಕಿ ಪ್ರವಾಸಿ ತಾಣವನ್ನು ಪರಿಚಯಿಸುವ ಕಾರ್ಯಕ್ರಮದಲ್ಲಿ ಸಿಗಂದೂರು ಕ್ಷೇತ್ರವನ್ನು ಪರಿಚಯುಸುತ್ತಿದ್ದರು.. ಲಾಂಜ್ ನಲ್ಲಿ ಹೋಗೋದು.. ಅದ್ಭುತ ಅನುಭವ ಕೊಡುವ ಬಗ್ಗೆ ಹೇಳುತ್ತಿದ್ದರು.. ಮೊದಲಿಗೆ ಅವರ ನಿರೂಪಣೆ ಆ ಜಾಗಕ್ಕೆ ಹೋಗಲೇ ಬೇಕು ಅನ್ನುವಷ್ಟು ಸ್ಫೂರ್ತಿ ಕೊಡುತ್ತಿತ್ತು.


ಪಕ್ಕದಲ್ಲಿ ರಾಜ ಕೂತಿದ್ದ......

ಲೋ ರಾಜ (ನನ್ನ ಮಾವನನ್ನು ಕರೆಯುತ್ತಿದ್ದ ಪರಿ!.. ಆ ಊರನ್ನು ನೋಡಬೇಕು ಕಣಲೇ.. !

"ಸರಿ.. ಈ ಎರಡನೇ ಶನಿವಾರ ರಜೆ ಇದೆ.. ಬುಕ್ ಮಾಡೋಣ... ಶಿವಮೊಗ್ಗದಲ್ಲಿ ನನ್ನ ಸ್ನೇಹಿತನ ಕ್ಯಾಬ್ ಇದೆ.. ಫೋನ್ ಮಾಡ್ತೀನಿ" ಅಂದ.. 

ಕೂತು ಕೂತಲ್ಲೇ ಕಾರ್ಯಕ್ರಮ ಸಿದ್ಧವಾಯಿತು.... 

ಸರಿ ಮಡದಿ ಮಗಳು ಮತ್ತೆ ರಾಜನ ಜೊತೆ ಶಿವಮೊಗ್ಗಕ್ಕೆ ಹೊರಟೇಬಿಟ್ಟೆವು... ಶುಕ್ರವಾರ ರಾತ್ರಿ.. 

ಶನಿವಾರ ಸ್ನಾನ ಸಂಧ್ಯಾವಂದನೆ ಎಲ್ಲಾ ಮುಗಿಸಿ.. ಹೊರಟಿದ್ದು ಬೆಳಿಗ್ಗೆ ಏಳು ಘಂಟೆಗೆ.. 

ವರದಹಳ್ಳಿ.. ಸಿಗಂದೂರು.. ಕೊಲ್ಲೂರು.. ಶಿವಮೊಗ್ಗ ಎನ್ನುವ ಪಟ್ಟಿ ಸಿದ್ಧವಾಗಿತ್ತು.. 

ಪುಟ್ಟಣ್ಣ ಕಣಗಾಲ್ ಅವರ ಅಮೃತಘಳಿಗೆಯ "ಹಿಂದೂಸ್ಥಾನವೂ ಎಂದೂ ಮರೆಯದ" ಹಾಡನ್ನು ನೋಡಿದಾಗಿಂದ ಆ ಪುಣ್ಯಕ್ಷೇತ್ರವನ್ನು ನೋಡುವ ಬಸುರಿ ಬಯಕೆ ಹೊತ್ತಿದ್ದ ನನಗೆ.. ಆ ಆಸೆ ಈಡೇರುವ ಖುಷಿ.. 

ಶ್ರೀಧರ ತೀರ್ಥದಲ್ಲಿ ಮೋರೆ ತೊಳೆದು... ೨೨೫ ಮೆಟ್ಟಿಲು ಹತ್ತಿ ಹೋದಾಗ ಕಂಡಿದ್ದು ಶ್ರೀಧರ  
ಸ್ವಾಮಿಗಳ ಆಶ್ರಮ.. ಮನಸ್ಸು ಹಕ್ಕಿಯ ಹಾಗೆ ಹಾರಾಡಿತ್ತು .. ಅಲ್ಲಿಂದ ಸ್ವಲ್ಪ ಮೇಲೆ ಹತ್ತಿದರೆ ಧರ್ಮಧ್ವಜ ಇರುವ ಸ್ಥಳವಿತ್ತು.. ಸುಮಾರು ಅರ್ಧ ಕಿಮೀಗಳಷ್ಟು ದೂರ ಅಷ್ಟೇ.. ಆ ಜಾಗವನ್ನು ನೋಡಬೇಕು ಅನ್ನುವ ಆಸೆ ಇತ್ತು.. ಆದರೆ ನನ್ನ ಜೊತೆ ಇದ್ದ ಮಡದಿ, ಮಗಳು.. ಮತ್ತು ರಾಜ.. ಹೋಗಲೇ ಬೇಡ.. ಹೊತ್ತಾಗುತ್ತೆ. ಸಿಗಂದೂರು ಲಾಂಜ್ ಮಿಸ್ ಆಗುತ್ತೆ ಅಂದ.. 

ಲಾಂಜ್ ಅನುಭವ ಬೇಕಿತ್ತು.. ಶ್ರೀಧರ ಸ್ವಾಮಿಗಳಿಗೆ ಅಲ್ಲಿಯೇ ನಮಿಸಿ ಮತ್ತೊಮ್ಮೆ ಬರುವೆ ಎಂದು ಸಿಗಂದೂರಿನ ಕಡೆ ಹೊರಟೆವು.. ನಾವು ಬಂದಿದ್ದ ಮಾರುತಿ ವ್ಯಾನ್ ರಸ್ತೆಯಲ್ಲಿ ಸೊಗಸಾಗಿ ನುಗ್ಗುತ್ತಿತ್ತು.. 

ನಮ್ಮ ಡ್ರೈವರ್ "ನೋಡಿ ಸರ್ ಹೊಳೆ ಬಾಗಿಲು ಬಂತು" ಅಂದ.. 

"ಬಾಗಿಲಾ? ಎಲ್ಲಿದೇರಿ ಬಾಗಿಲು.. ಹೊಳೆಗೆಂತ ಬಾಗಿಲು" ಅಂತ ತಮಾಷೆ ಮಾಡಿದೆ.. 

"ಸರ್ ಇದು ಶರಾವತಿ ನದಿಗೆ ಅಣೆಕಟ್ಟನ್ನು ಕಟ್ಟಿದಾಗ ಬಂದ ಹಿನ್ನೀರು ಈ ಪ್ರದೇಶವನ್ನು ಮುಳುಗಡೆ ಮಾಡಿತ್ತು.. ಆಗ ಸಿಗಂದೂರಿಗೂ ಮತ್ತು ಈ ಪ್ರದೇಶಕ್ಕೂ ಸೇತುವೆ ಅಂದರೆ ಈ ಲಾಂಜುಗಳೇ.... "

ಆಗಲೇ ಜನ ಜಮಾಯಿಸಿದ್ದರು.. ಬಸ್ಸುಗಳು.. ಕಾರುಗಳು, ಬೈಕು, ಸೈಕ್ಲಲ್ಲುಗಳು ನಿಂತಿದ್ದವು.. ನಾನು ಸುಮ್ಮನೆ ನೋಡುತ್ತಾ ನಿಂತಿದ್ದೆ.. ಉದಯ ಟಿವಿಯ ಕಾರ್ಯಕ್ರಮದಲ್ಲಿ ಬಸ್ಸು, ಕಾರು ಎಲ್ಲವನ್ನು ಸಾಗಿಸುತ್ತಾರೆ ಜನಗಳ ಜೊತೆಯಲ್ಲಿ ಅಂತ ತೋರಿಸಿದ್ದು ನೋಡಿದ್ದೇ.. ಈಗ ನನಗೆ ಕುತೂಹಲ ಇತ್ತು ಹೇಗಿರುತ್ತೆ, ಹೇಗೆ ನುಗ್ಗಿಸುತ್ತಾರೆ ಅಂತ.. 

ದೂರದಲ್ಲಿ ಬರುತ್ತಿದ್ದ ಲಾಂಜ್ ಹತ್ತಿರವಾಗುತ್ತಿತ್ತು.. ಅನತಿ ಕ್ಷಣದಲ್ಲಿ ನಮ್ಮ ಮುಂದೆ ಮನೆಯ ತರಹವೇ ಇದ್ದ ಲಾಂಜ್ ಬಂದು ನಿಂತಿತ್ತು.. 

ಬಸ್ಸುಗಳು, ಕಾರುಗಳು, ಜನರೂ ಎಲ್ಲವನ್ನು ತನ್ನ ಒಡಲಲ್ಲಿ ತುಂಬಿಸಿಕೊಂಡು ಹೊರಟಿತ್ತು.. ಪ್ರತಿಯೊಬ್ಬರಿಂದ ಒಂದು ರೂಪಾಯಿ ತೆಗೆದುಕೊಂಡು ಚೀಟಿ ಕೊಟ್ಟರು.. ನಾವೆಲ್ಲರೂ ಕಾರಿಂದ ಇಳಿದು ಹೊರಗೆ ಬಂದು ಹಿನೀರನ್ನು ನೋಡುತ್ತಾ ನಿಂತೆವು.. 

ಸುಮಾರು ಹತ್ತು ನಿಮಿಷಗಳ ಪಯಣ.. ಜೀವನಕ್ಕೆ ಒಂದು ಅದ್ಭುತ ಅನುಭವ ಕೊಡುವ ತಾಣವಾಗಿತ್ತು ಈ ಪಯಣ.. 

ಈ ಬದಿಯಿಂದ ಆ ಬದಿಗೆ ಹೋಗಿ ಇಳಿದು.. ಅಲ್ಲಿಂದ ಆ ಊರಿನ ಜೀಪನ್ನು ಹತ್ತಿ ದೇವಸ್ಥಾನಕ್ಕೆ ಬಂದೆವು.. ಸುಮಾರು ಒಂದೂವರೆ ಅಥವಾ ಎರಡು ಕಿಮೀಗಳ ದೂರ.. 

ಸಿಗಂದೂರನ್ನು ತನ್ನ ಅಭಯ ಹಸ್ತದಿಂದ ಕಾಪಾಡುತ್ತಿರುವ ಶ್ರೀ ಚೌಡೇಶ್ವರಿಯ ದರ್ಶನ ಮಾಡಿದೆವು.. ದೇವಿಯ ದರ್ಶನ  ಮಾಡಿ ನಮ್ಮ ನಮ್ಮ ಕೋರಿಕೆ ಸಲ್ಲಿಸಿ.. ಕೊಲ್ಲೂರಿನ ಕಡೆಗೆ ಹೊರಟೆವು.. 

ಕೊಲ್ಲೂರಿನ ದರ್ಶನ ಮೊದಲ ಬಾರಿಗೆ.. ರಂಗನಾಯಕಿ ಚಿತ್ರದಲ್ಲಿ "ಜೈ ಜಗದಂಬೆ" ಹಾಡಿನಲ್ಲಿನೋಡಿದ್ದು .. ಇಲ್ಲಿ ಸಾಕ್ಷಾತ್ಕಾರವಾಗಿತ್ತು.. ತಾಯಿ  ಮೂಕಾಂಬಿಕೆಯ ದರ್ಶನ.. ಸ್ವಲ್ಪ ಹೊತ್ತು ಅಲ್ಲೇ ಜೋತು ಮಾಡಿದ ಜಪ... ಮನಸ್ಸಿಗೆ ತಂಪಾದ ಅನುಭವ ನೀಡಿತ್ತು.. 

ಮತ್ತೆ ಶಿವಮೊಗ್ಗೆಗೆ ಬಂದು.. ಊಟ ಮಾಡಿ.. ಬಸ್ಸು ಹತ್ತಿದಾಗ  ಲೋಕವೂ ಸುಂದರವಾಗಿ ಕಾಣತೊಡಗಿತ್ತು.. 

ಈ ಲೇಖನ ಅಷ್ಟು ವರ್ಷ ಆದ ಮೇಲೆ ಬರೆಯುವ ಕಾರಣವೆಂದರೆ.. ನನ್ನ ಸೋದರ ಮಾವ ರಾಜ.. ಸುಮ್ಮನೆ ಒಂದು ಕಾರ್ಯಕ್ರಮ ಹೇಳಿದರೆ ಸಾಕು.. ಇಲ್ಲ.. ಆಗೋಲ್ಲ.. ನೋಡೋಣ ಅನ್ನುವ ಹಾರಿಕೆಯ ಉತ್ತರವೇ ಇರುತ್ತಿರಲಿಲ್ಲ.. 

ಸರಿ ಕಣೋ ನೆಡೆಯೋ.. ಅನ್ನುವ ಉತ್ತರವೇ ಸದಾ ಅವನಿಂದ.. !

ನನ್ನ ಪ್ರವಾಸದ ಹುಚ್ಚಿನ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಿದ್ದು ಅವನೇ.. ದಾರಿಯುದ್ದಕ್ಕೂ ತಮಾಷೆ ಮಾತುಗಳು.. ಹಾಸ್ಯ.. ಅವನಿಂದ ನನಗೆ ಬೀಳುತ್ತಿದ್ದ ಪ್ರೀತಿಯ ಒದೆ.. ಹಾ ಹೌದು ಒದೆ.. ಅವನನ್ನು ಚೆನ್ನಾಗಿ ರೇಗಿಸುತ್ತಿದ್ದೆ.. ಕೋಪ ಬರುತ್ತಿರಲಿಲ್ಲ.. ಆದರೆ ಅವನ ನಗು ಮತ್ತು ಅವನು ಕೊಡುತ್ತಿದ್ದ ಪ್ರೀತಿಯ ಒದೆಗಳು.. ಅದಕ್ಕಿಂತ ಆತನ ತೂಗುದೀಪ ಶ್ರೀನಿವಾಸ ನಗು..ಹೌದು ಅವನ ನಗು ನನ್ನ ಕಿವಿಯಲ್ಲಿ ಯಾವಾಗಲೂ ಪ್ರತಿಧ್ವನಿಯಾಗುತ್ತಿರುತ್ತದೆ.. 

ನಮ್ಮನ್ನು ಅವನ ನೆನಪಲ್ಲಿ ಬಿಟ್ಟು ಆನಂದಲೋಕಕ್ಕೆ ತೆರಳಿ ಹತ್ತು ವರ್ಷಗಳಾಗುತ್ತಿವೆ.. ಅವನು ಇಲ್ಲ ಅನ್ನುವ  ಮಾತೆ ನನ್ನೊಳಗೆ ಬರುತ್ತಿಲ್ಲ.. ಕಾರಣ ಪ್ರತಿಯೊಂದು ದಿನ.. ಪ್ರತಿಯೊಂದು ಕ್ಷಣವೂ ಅವನ ನೆನಪು ಒಂದಲ್ಲ ಒಂದು ರೀತಿ ಕಾಡುತ್ತಿರುತ್ತಲೇ  ಇರುತ್ತದೆ.  ಅಣ್ಣಾವ್ರ ಯಾವುದೇ ಚಿತ್ರಗಳು, ಹಾಡುಗಳು, ಬಾಲಣ್ಣನ ಯಾವುದೇ ಚಿತ್ರದ ಸಂಭಾಷಣೆ.. ಅವನ ಫೇವರಿಟ್ ಸುಜುಕಿ ಸಮುರೈ.. ಅಮಿತಾಬ್ ಚಿತ್ರಗಳು.. ಹೀಗೆ ಪ್ರತಿ ಕ್ಷಣವೂ ಅವನ ಇರುವಿಕೆ ನನ್ನ ಜೊತೆಯಲ್ಲಿ ಇದ್ದೆ ಇದೆ.. 

ಇದು ನನ್ನೊಬ್ಬನೆ ಮಾತು ಮಾತ್ರವಲ್ಲ.. ಅವನನ್ನು ಒಂದು ಕ್ಷಣ ಮಾತಾಡಿಸಿದ ಪ್ರತಿಯೊಬ್ಬರ ಮಾತು ಇದೆ.. 

ರಾಜ ಇಂದು ನಿನ್ನ ಜನುಮದಿನ.. ನೀನಿಲ್ಲ ಅನ್ನುವ ಮಾತೆ ಇಲ್ಲ. ನೀ ನನ್ನೊಳಗೆ ಸದಾ ಇರುವೆ.. !

Saturday, April 8, 2017

ರಾಜ ನೀ ಅಜರಾಮರ!!!

ಮದುವೆ ಆದ ಮೇಲೆ.. ನನ್ನವರು ನನ್ನ ಜೊತೆ ಹೆಚ್ಚು ಕಾಲ ಕಳೆಯಬೇಕು.. ಹೊರಗೆ ಹೊರಟಾಗ ನಾವಿಬ್ಬರೇ ಇರಬೇಕು.. ಅಲ್ಲಿ ನಮಗೆ ಖಾಸಗಿ ವೇಳೆ ಬೇಕು ಹೀಗೆಂದು ಆಸೆ ಪಡುವ ದಂಪತಿಗಳು ಸಾಮಾನ್ಯ ಇರುತ್ತಾರೆ.. ಅದು ಮದುವೆ ಆದ ಹೊಸತರಲ್ಲಿ.

ಇದಕ್ಕೆ ತದ್ವಿರುದ್ಧ ಅಂದರೆ.. ದಂಪತಿಗಳಿಗೆ ನೆಂಟರಿಷ್ಟರು ಎರಡು ಕಡೆಯ ನೆಂಟರು ಪರಿಚಯವಿದ್ದರೆ.. ಅದೊಂದು ಬೊಂಬಾಟ್ ವಿಷಯವಾಗಿರುತ್ತೆ.. ಹೌದು ಅದು ಕಹಿ ಮತ್ತು ಸಿಹಿ ಅನುಭವ ಎರಡು ಕೊಡಬಹುದು ಆದರೂ ನನ್ನ ಬಾಳಿನಲ್ಲಿ ಸಿಹಿಯೇ ಸಿಕ್ಕಿದ್ದು ಹೆಚ್ಚು..

ನನ್ನ ಅಮ್ಮ ಅಪ್ಪ ಹಾಸನದ ಪ್ರತಿ ಪ್ರತಿ ಮನೆಗೂ ಚಿರಪರಿಚಿತ.. ಓಹ್ ನೀವು ವಿಶಾಲೂ ಮಕ್ಕಳು ನೀವು ಮಂಜಣ್ಣನ ಮಕ್ಕಳು ಎನ್ನುವುದೇ ಸರ್ವೇ ಸಾಮಾನ್ಯವಾದ ವಿಷಯ..

ವಿಷಯ ಅಂದರೆ.. ನನ್ನ ನೆಚ್ಚಿನ ಸೋದರ ಮಾವ ರಾಜ.. ನಮ್ಮ ಮನೆಯಲ್ಲಿ ಅವನಿಲ್ಲದೆ ನಾವು ಹೊರಗೆ ಹೋಗುತ್ತಿರಲಿಲ್ಲ. ಚಲನ ಚಿತ್ರ, ನೆಂಟರಿಷ್ಟರ ಕಾರ್ಯಕ್ರಮ.. ಕಡೆಯಲ್ಲಿ ಏನೂ ಇಲ್ಲದೆ ಹೋದರು ಸಂಜೆ ಆರಾಮಾಗಿ ಕೂತು ಅಂಗಡಿಯಿಂದ ತಂದ ಬೋಂಡಾ (ಹೌದು ಅವನಿಗೆ ಬೋಂಡಾ ಎಂದರೆ ಬಲು ಇಷ್ಟ).. ಚೆನ್ನಾಗಿ ತಿಂದು ಹರಟೆ ಹೊಡೆಯುವುದು ಸಾಮಾನ್ಯವಾಗಿತ್ತು. ನಮ್ಮ ಮನೆಯಲ್ಲಿ ಖಾಸಗಿ ಮಾತುಗಳು ಎನ್ನುವುದೇ ಇರಲಿಲ್ಲ.. ನಾವು ಮಾತಾಡುತ್ತಾ ಇದ್ದಾಗ ಅವನು ಬಂದರೆ ಆ ಮಾತುಗಳು ಹಾಗೆ ಮುಂದುವರೆಯುತ್ತಿದ್ದವು.. ಅವನದು ಒನ್ ವೆ ಟ್ರಾಫಿಕ್.. ತಾನು ಕೇಳಿಸಿಕೊಂಡದ್ದನ್ನು ತನ್ನ ಮನದಲ್ಲಿಯೇ ಇಟ್ಟುಕೊಳ್ಳುತ್ತಿದ್ದ.. ಯಾರಿಗೂ ಹೇಳುತ್ತಿರಲಿಲ್ಲ..

ನನ್ನ ಮದುವೆಗೆ ಮುಂಚೆ.. ನಾವಿಬ್ಬರು ಮಾಡದ ತರಲೆಗಳಿರಲಿಲ್ಲ.. ಎಲ್ಲೇ ಹೋಗಲಿ ನಾನು, ರಾಜ, ನನ್ನ ಅಣ್ಣ ವಿಜಯ, ನನ್ನ ತಮ್ಮ ಮುರುಳಿ ಒಟ್ಟಿಗೆ.. ತರಲೆಗಳು, ಹಾಸ್ಯಗಳು ಎಲ್ಲವೂ ಜೊತೆಯಾಗಿಯೇ. ...

ನನ್ನ ಮದುವೆ ಆಯಿತು... ಯಥಾ ಪ್ರಕಾರ ರಾಜನ ಮತ್ತು ನನ್ನ ಬಂಧ ಇನ್ನಷ್ಟು ಗಟ್ಟಿಯಾಯಿತು.. ಕಾರಣ ಸವಿತಾಳಿಗೆ ರಾಜನ ಪರಿಚಯ ಚೆನ್ನಾಗಿಯೇ ಇತ್ತು.. ಕಾರಣ ಸವಿತಾಳ ಅಮ್ಮ ಮತ್ತು ನನ್ನ ಸೋದರ ಮಾವನ ಕುಟುಂಬ ಹತ್ತಿರದ ಸಂಬಂಧವಾಗಿತ್ತು... ಹಾಗಾಗಿ ಸವಿತಾಳೇ ನನಗೆ ಹೇಳುತ್ತಿದ್ದಳು.. ಶ್ರೀ ರಾಜನನ್ನ ಕರೆಯಿರಿ.. ಎಲ್ಲಾದರೂ ಹೋಗೋಣ.. !!!

ನಮ್ಮ ಮನೆಯಲ್ಲಿ ಅಪ್ಪ ಅಮ್ಮ ಅಕ್ಕ ಅಣ್ಣ ಅತ್ತಿಗೆ, ತಮ್ಮ ,  ನನ್ನ ಮಡದಿ, ಮಕ್ಕಳು ತುಂಬು ಕುಟುಂಬ..  ಅವನು ಬಂದರೆ ಒಂದು ರೀತಿಯಲ್ಲಿ ಸಂತಸ ನಗೆಯ ಚಂಡಮಾರುತವನ್ನೇ ತರುತ್ತಿದ್ದ.. ಪ್ರೀತಿಯಿಂದ ಒಬ್ಬರಿಗೊಬ್ಬರು ಬಯ್ದುಕೊಂಡರೂ.. ಬಾರೋ ಅಂತ ಮತ್ತೆ ಅಪ್ಪಿಕೊಂಡು ಮತ್ತೆ ನಗೆಯನ್ನು ತರಿಸುತ್ತಿದ್ದ.. !!!

ಇದು ಹಾಲು ಜೇನಿನ ಮನಸ್ಸಿನ ರಾಜನ ಸ್ಪೆಷಾಲಿಟಿ.. !!!

ಅವನ ಜೊತೆಯಲ್ಲಿನ ಕೆಲವು ಪ್ರಸಂಗಗಳು ಎಂದಿಗೂ ಅಮರ

೧) ನಾನು, ರಾಜ ಮತ್ತು ಸವಿತಾ ಮನೆಯ ಹತ್ತಿರವೇ ಇದ್ದ ಶನಿದೇವರ ಗುಡಿಗೆ ಹೋಗಿದ್ದೆವು.. ನಮಸ್ಕಾರಗಳು ಎಲ್ಲಾ ಆದ ಮೇಲೆ., ಪ್ರಸಾದ ಮೆಲ್ಲುತ್ತಾ ಹೊರಗೆ ಕೂತಿದ್ದೆವು.. ಅಂದು ಸಿಹಿ ಪೊಂಗಲ್ ಪ್ರಸಾದದ ರೂಪದಲ್ಲಿತ್ತು..
ರಾಜ .." ಪ್ರಸಾದ ಚೆನ್ನಾಗಿದೆ ಅಲ್ವೇನೋ ಅಂದ.. " ಸವಿತಾ ಹೂಗುಟ್ಟಿದಳು.. ಹೌದು ಚೆನ್ನಾಗಿದೆ ಎಂದಳು..
ನಾ ಸುಮ್ಮನಿದ್ದೆ.. ಮೆಲ್ಲಗೆ "ಹೌದು ರಾಜ ಚೆನ್ನಾಗಿದೆ.. ಇದಕ್ಕೆ ಒಗ್ಗರಣೆ ಹಾಕಿದ್ದಾರೆ ಚೆನ್ನಾಗಿರುತ್ತಿತ್ತು" ಅಂದೇ.. ಒಂದು ಕ್ಷಣ  ತಲೆ ಗಿರ್ರ್ ಅಂತ ತಿರುಗುತ್ತಿತ್ತು.. ಕಾರಣ ಗೊತ್ತೇ ರಾಜ ಫಟ್ ಅಂತ ನನ್ನ ತಲೆಗೆ ಬಿಟ್ಟಿದ್ದ.. ಮೂವರು ದೇವಸ್ಥಾನ ಎನ್ನುವುದನ್ನು ಮರೆತು ಜೋರಾಗಿ ನಗಲು ಶುರುಮಾಡಿದೆವು.. !!!

೨) "ಶ್ರೀಕಾಂತೂ.. ವಿಜಯನಗರದ ತ್ರಿವಳಿಗಳ ಬೋಂಡಾದ ಅಂಗಡಿಗೆ ಹೋಗಿ ತರೋಣ.. "
     "ಹೋಗಲೇ... ಅಲ್ಲಿ ಇರುವ ಜನರನ್ನು ನೆನೆಸಿಕೊಂಡರೆ.. ನಮಗೆ ಕಾದ ಎಣ್ಣೆ ಕೂಡ ಸಿಗೋಲ್ಲ"
     "ಬಾರಲೋ.. ಹೋಗೋಣಾ.. ಮಗ ಬರಿ ಇಲ್ಲಿ ಕೂತೆ ಕಥೆ ಹೇಳ್ತೀಯ.. "
     ಸರಿ ಇಬ್ಬರೂ ಹೋದೆವು.. ಅಲ್ಲಿ ಕಾದು ಕಾದು ಸಾಕಾಯಿತು.. ನಾ ಗೆದ್ದೇ ಎನ್ನುವ ಭಾವ ನನ್ನದು.. ಅವನು.. ಶ್ರೀಕಾಂತೂ ಸುಮ್ಮನೆ ಈ ತ್ರಿವಳಿಗಳ ಅಂಗಡಿ ಹತ್ತಿರ ನಿಂತು.. ಇವರು ಬೋಂಡಾ ಕೊಡುವ ಹೊತ್ತಿಗೆ ಆಸೆಯೇ ಹೋಗಿರುತ್ತೆ.. ಆಲೂಗೆಡ್ಡೆ, ಈರುಳ್ಳಿ , ಕಡಲೆಹಿಟ್ಟು ಕೊಂಡು ಸೀದಾ ಮನೆಗೆ ಹೋಗಿ ನನ್ನ ಅಮ್ಮನಿಗೆ (ಅರ್ಥಾತ್ ಅವನ ಅಕ್ಕ) ಕೊಟ್ಟು "ವಿಶಾಲೂ ನೀನೆ ಮಾಡಿಬಿಡು.. ಇವನ ಬಾಯಿ ಸುಡುಗಾಡು ಬಾಯಿ ಅದೇನು ಹೇಳ್ತಾನೋ ಹಾಗೆ ಆಗುತ್ತೆ.. ಅಂತ ಪ್ರೀತಿಯಿಂದ ಒಂದೆರಡು ಒದೆಗಡುಬನ್ನು ಕೊಟ್ಟಿದ್ದ.

೩) ಡರ್ ಡರ್ ... ಈ ಶಬ್ದ ನಮ್ಮ ಮನೆಯ ಮುಂದೆ ಬಂದು ನಿಂತರೆ ಸಾಕು ನಮ್ಮ ಮನೆಯ ಮಕ್ಕಳು ರಾಜ ಮಾವ ಬಂದ್ರು ರಾಜ ಮಾವ ಬಂದ್ರು ಅಂತ ಕುಣಿಯುತ್ತಿದ್ದವು.. ಅವನು ಬೈಕನ್ನು ಸರಿಯಾಗಿ ಗೇಟಿಗೆ ಅಡ್ಡ ನಿಲ್ಲಿಸುತ್ತಿದ್ದ.. ಎಲ್ಲಾ ಮಕ್ಕಳನ್ನು ಮಾತಾಡಿಸಿ.. ಆಮೇಲೆ ದೇಶಾವರಿ ನಗುತ್ತಾ ನಮ್ಮೆಲ್ಲರನ್ನೂ ಮಾತಾಡಿಸುತ್ತಿದ್ದ.. ಹಿರಿಯರು ಕಿರಿಯರು ಅನ್ನದೆ ಎಲ್ಲರಲ್ಲೂ ಬೆರೆಯುತ್ತಿದ್ದ ಅಪರೂಪದ ಮನಸ್ಸು ಅವನದು.
ಅವನ ಇಷ್ಟವಾದ ಬೈಕ್ ಜೊತೆಯಲ್ಲಿ ನನ್ನ ಅಣ್ಣನ ಮತ್ತು ಅಕ್ಕನ ಮಕ್ಕಳು.. ಆದಿತ್ಯ & ವರ್ಷ 

೪) ಅವನ ಅಪ್ಪ ಅರ್ಥಾತ್ ನನ್ನ ತಾತನ ತಿಥಿಯ ಪ್ರಸಾದ ನಮ್ಮ ಮನೆಗೆ ತಲುಪಿಸಲು ಕೊಟ್ಟಿದ್ದರು.. ಆಗ ಅವನ ಹತ್ತಿರ ಬಜಾಜ್ ಸ್ಕೂಟರ್ ಇತ್ತು.. ಸಂಜೆ ಮನೆಗೆ ಬಂದ.. ವಿಶಾಲೂ ಪ್ರಸಾದ ತಂದಿದ್ದೀನಿ ತಗೋ ಅಂತ ಕೊಟ್ಟಾ..
ಅಕ್ಕ ಮೊದಲು ಪ್ರಸಾದ ತಿಂದವಳೇ..
ಏನೋ ರಾಜ ಪೆಟ್ರೋಲ್ ವಾಸನೆ ಬರ್ತಾ ಇದಿಯಲ್ಲೋ ಅಂದಳು...
ನಿನಗೆ ಇರಬಾರದ ವಾಸನೆ ಬರುತ್ತೆ.. ಸುಮ್ನೆ ತಿನ್ನು.. ಪೆಟ್ರೋಲ್ ವಾಸನೆ ಅಂತೆ ಪೆಟ್ರೋಲ್ ವಾಸನೆ ಅಂತ ಬಯ್ದ

ಆಮೇಲೆ ಇಡೀ ಕವರನ್ನು ಬಿಚ್ಚಿ ನೋಡಿದರೆ.. ಆ೦ಬಡೇ, ವಡೆ, ರವೇ ಉಂಡೆ ಎಲ್ಲವೂ "ಘಮ್" ಅಂತ ಪೆಟ್ರೋಲ್ ಜೊತೆ ಇದ್ದೀವಿ ಎಂದು ಹೇಳುತ್ತಿತ್ತು.. ಅವನ ಸ್ಕೂಟರಿನ ಡಿಕ್ಕಿ ತೆಗೆದೆವು.. ಆಗ ಗೊತ್ತಾಯಿತು.. ಅವನು ಪೆಟ್ರೋಲ್ ಹಾಕಿಸುವಾಗ.. ಆ ಬಂಕಿನವನು ಒಂದಷ್ಟು ಹನಿಗಳನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಚೆಲ್ಲಿದ್ದ.. ಅದು ನಿಧಾನವಾಗಿ ಇಳಿದು ಡಿಕ್ಕಿಗೆ ಸೇರಿ.. ಅದರೊಳಗೆ ಇದ್ದ ಕಾಗದ ಪತ್ರಗಳು ಮತ್ತೆ ಪ್ರಸಾದ ಎಲ್ಲವನ್ನು ಪೆಟ್ರೋಲ್ ಮಯಮಾಡಿತ್ತು . !!!
ಅಂದಿನಿಂದ ಪೆಟ್ರೋಲ್ ವಡೆ ಅಂತಾನೆ ಅವನನ್ನು ರೇಗಿಸುತ್ತಿದ್ದೆವು..

ಹೀಗೆ ಅವನ ಲೋಕದಲ್ಲಿ ದುಃಖ ಎನ್ನುವ ಮಾತೆ ಇರುತ್ತಿರಲಿಲ್ಲ.. ಅವನ ಜೀವನ ಹಸನಾಗಿರಲಿಲ್ಲ.. ಆದರೆ ಅವನ ಸಂಪರ್ಕಕ್ಕೆ ಯಾರೇ ಬಂದರು ಅವನ ದುಃಖ ತಟ್ಟುತ್ತಿರಲಿಲ್ಲ ಬದಲಿಗೆ ನಕ್ಕು ನಕ್ಕು ಸುಸ್ತಾಗಿ ಬಿಡುತ್ತಿದ್ದರು..

ರಾಜನ ವ್ಯಕ್ತಿತ್ವದ ಬಗ್ಗೆ ಒಂದು ಮಾತು ಹೇಳಬೇಕೆಂದರೆ.. ಓದಿದ ನೆನಪು.. ಹಸು ಏನೇ ತಿಂದರೂ... ಅದೆಲ್ಲಾ ಹಸುವಿನ ಹೊಟ್ಟೆಯೊಳಗೆ ಕರಗಿ ಅಮೃತ ಸುಧೆಯುಳ್ಳ ಹಾಲು ಕೊಡುತ್ತದೆ .. ಹಾಗೆ ನಮ್ಮ ರಾಜ ಅವನಿಗೆ ಜೀವನದಲ್ಲಿ ಹಿಂಸೆ ಇದ್ದರೂ, -ಅವನನ್ನು ಕೆಲವರು ಅವಮಾನ ಮಾಡಿದರೂ, ಅವನಿಗೆ ಸಿಗಬೇಕಿದ್ದ ಸ್ಥಾನ ಮಾನಗಳು ಸಿಗದೇ ಇದ್ದರೂ, ಅವನ ಮಾತುಗಳು ಮಾತ್ರ ಎಂದಿಗೂ ಧನಾತ್ಮಕವಾಗಿರುತ್ತಿತ್ತು..

ನನಗೆ ನೆನಪಿರುವ ೨೦ವರ್ಷಗಳಿಗೂ ಮಿಗಿಲಾದ ಅವನ ಒಡನಾಟದಲ್ಲಿ ಅವನು ಒಮ್ಮೆಯೂ ಯಾರ ಬಗ್ಗೆಯೂ ಹಗುರಾಗಿ ಮಾತಾಡಿದ್ದು ನಾ ಕೇಳಿಲ್ಲ..

ಸ್ಫಟಿಕ ಮತ್ತು ರಾಜ ನನ್ನ ಪ್ರಕಾರ ಒಂದೇ !!!
ಸುಂದರ ನೆನಪುಗಳು ಅವನ ಜೊತೆಯಲ್ಲಿ ಹಾಗೆ ನಿಂತಿವೆ..
ಘಾಟಿ ಸುಬ್ರಮಣ್ಯಕ್ಕೆ ಹೋಗಿದ್ದಾಗಿನ ಚಿತ್ರ 
ಇಂದು ರಾಜನ ಜನುಮದಿನ.. ರಾಜ ನಿನ್ನ ಆಶೀರ್ವಾದ ಸದಾ ಇರುತ್ತದೆ.. ನಿನ್ನನ್ನು ದೈಹಿಕವಾಗಿ ನಾವು ಕಳೆದುಕೊಂಡಿದ್ದೇವೆ ಅಷ್ಟೇ.. ಆದರೆ ಮಾನಸಿಕವಾಗಿ ನಮ್ಮ ಮನೆ ಮನೆಗಳಲ್ಲೂ ಅಜರಾಮರ..

ಹಾಗೆಯೇ ಇಂದು ನನ್ನ ವೈವಾಹಿಕ ಜೀವನಕ್ಕೆ ಹದಿನೈದರ ಸಂಭ್ರಮ..
ನಾ ಇಷ್ಟ ಪಡುವ ನಿನ್ನ ತೂಗುದೀಪ ಶ್ರೀನಿವಾಸ ಶೈಲಿಯ ನಗುವನ್ನು ಹರಿಸಿಬಿಡು..
ಹಾಗೆ "ಶ್ರೀಕಾಂತೂ" ಎನ್ನುವ ನಿನ್ನ ಕೂಗು ನನ್ನ ಕಿವಿಗೆ ಯಾವಾಗಲೂ ಅಪ್ಪಳಿಸುತ್ತಲೇ ಇರಲಿ..!!!

ರಾಜ ನೀ ಅಜರಾಮರ!!!

Friday, April 8, 2016

ಮೂರು ಮೂರು ಧಮಾಕಗಳು----ಹೊಸ ವರ್ಷದ ಸಂಭ್ರಮ!!!

ದೇವರು ಕೊಡುವಾಗ ಚಪ್ಪರ ತೂತಾಗುವ ಹಾಗೆ ಕೊಡುತ್ತಾನೆ ಎನ್ನುತ್ತದೆ ಗಾದೆ.

ಇಂದು ಒಂದು ರೀತಿಯಲ್ಲಿ ಹಾಗೆಯೇ.

ನನ್ನ ಆತ್ಮೀಯ ಗೆಳೆಯ, ಮಾವ, ನನ್ನೆಲ್ಲಾ ತರಲೆಗಳ ಸಂಗಾತಿ..  ರಾಜ ಹುಟ್ಟಿದ ದಿನ.
ಸವಿತಾ, ನನ್ನ ಬಾಳ ಗೆಳತಿಯಾಗಿ ಬಂದು ಹದಿನಾಲ್ಕು ವನವಾಸದಂಥಹ ವರ್ಷಗಳನ್ನು ಕಳೆದ ಸಂಭ್ರಮ :-)
ದಿನಸೂಚಿಯನ್ನು ಒಮ್ಮೆ ಮಗುಚಿ ಹಾಕಲು ಹೋದರೆ.. ಲೋ ಶ್ರೀ.. ಇದೆ ಕಡೆ ಪುಟ.. ಹೊಸ ಪಂಚಾಗ ಇಂದಿನಿಂದ ಶುರು ಕಣೋ ಎಂದಿತು ಪಂಚಾಗ.. ಹೊಸ ವರ್ಷದ ಸಂಭ್ರಮ.. !

ಹೀಗೆ ಮೂರು ಮೂರು ಧಮಾಕಗಳು ಸಾಲುಗಟ್ಟಿ ನಿಂತಿರುವಾಗ, ಮನಸ್ಸಿಗೆ ಅನ್ನಿಸಿತು, ರಾಜನ ಬಗ್ಗೆ ಬರೆದು ಬಹಳ ದಿನ ಆಗಿದೆ, ಸರಿ ಹೊಸ ವರ್ಷದ ಸಂಭ್ರಮದಲ್ಲಿ ಮತ್ತೆ ಅವನ ಲೋಕಕ್ಕೆ ಹೆಜ್ಜೆ ಇಡೋಣ ಎನ್ನಿಸಿ ಈ ಲೇಖನ, ನನ್ನ ಪ್ರೀತಿಯ ಮಾವ ರಾಜನಿಗೆ ಅರ್ಪಿತ!!!

*****

ಮನಸ್ಸು ಕದಡಿದ ಜೇನು ಗೂಡಾಗಿತ್ತು. ಬೈಕ್ ಒಂದು ಭಾನುವಾರ ತಿಂಡಿ ತಿಂದು, ಹಾಗೆ ಸುತ್ತಾಡಿ ಬರೋಣ ಅಂತ ಹೊರಟೆ.
ನನ್ನ ಬೈಕಿಗೆ ಯಾವತ್ತೂ ಹೊಟ್ಟೆ ತುಂಬಾ ಊಟ ಹಾಕಿದ್ದಿಲ್ಲ, ಆದರೆ ಅದರ ಹಿಂದಿನ ದಿನ ಯಾಕೋ ತಲೆ ಕೆಟ್ಟು ಫುಲ್ ಟ್ಯಾಂಕ್ ಮಾಡಿಸಿದ್ದೆ,

ಸರಿ ಹೊರಟೆ..  ಮನೆಯಿಂದ ಒಂದೆರಡು ಕಿಮಿಗಳು ಬಂದ ಮೇಲೆ, ಯಾಕೋ ನನ್ನ ಮನಸ್ಸಿನ ಬ್ಯಾಟರಿ ಚಾರ್ಜ್ ಕಡಿಮೆ ಇದೆ ಅನ್ನಿಸಿತು. ಸರಿ ನನ್ನ ಬ್ಯಾಟರಿ ಚಾರ್ಜರ್ ಹಾಸನದಲ್ಲಿ ಇತ್ತು (ನನ್ನ ಸೋದರತ್ತೆ ಮಗ ಶ್ರೀ ನಾಗಭೂಷಣ). ಇವನ ಹತ್ತಿರ ಒಂದು ನಿಮಿಷ ಮಾತಾಡಿದರೂ ನನ್ನ ಮನಸ್ಸು ಹಗುರಾಗುತ್ತಿತ್ತು. ಬೇರೆ ಯೋಚನೆಯೇ ಇಲ್ಲಾ.. ಬೈಕ್ ನಲ್ಲಿಯೇ ಹಾಸನಕ್ಕೆ ಹೋಗೋಣ ಅನ್ನಿಸಿತು. ಮನೆಗೆ ಕರೆ ಮಾಡಿ ಹೇಳಲು ಮನಸ್ಸು ಬರಲಿಲ್ಲ (ಕಾರಣ, ಹೋಗಲು ಬಿಡುತ್ತಿರಲಿಲ್ಲ :-) )

ಜಾಲಹಳ್ಳಿ ಕ್ರಾಸ್ ದಾಟಿದಾಗ, ತಕ್ಷಣ ಅನ್ನಿಸಿತು, ಅರೆ ರಾಜ ಇಲ್ಲಿಯೇ ಅಲ್ಲವೇ ಇರುವುದು.. ತಕ್ಷಣ ಅವನ ಜಂಗಮವಾಣಿಗೆ ಕರೆ ಮಾಡಿದೆ

"ಲೋ ಗುರು.. ಹಾಸನಕ್ಕೆ ಹೋಗ್ತಾ ಇದ್ದೀನಿ ಬರ್ತೀಯ" (ನಮ್ಮಿಬ್ಬರ ಸಂಭಾಷಣೆ ಯಾವಾಗಲೂ ಹೀಗೆಯೇ.. ಪೀಠಿಕೆ ಏನೂ ಇಲ್ಲಾ ಸೀದಾ ವಿಷಯಕ್ಕೆ ಡೈವ್)
"ಬೆಳಿಗ್ಗೆ ನಿನ್ನೆ ತಿಪಟೂರಿಗೆ ಹೋಗಿದ್ದೆ, ಇವಾಗ ನೆಲಮಂಗಲ ಹತ್ತಿರ ಇದ್ದೀನಿ.. ನೀ ಎಲ್ಲಿ ನಿಂತಿದ್ದೀಯೋ ಅಲ್ಲೇ ಇರು, ಅರ್ಧ
ಘಂಟೆ ಬರ್ತೀನಿ.. "

ಇದು ನಮ್ಮಿಬ್ಬರ ಮಧ್ಯೆ ಇದ್ದ ಸಂಬಂಧ.. ಯಾಕೆ ಅಂತ ಅವ ಕೇಳಲಿಲ್ಲ, ಯಾಕೆ ಅಂತ ನಾ ಹೇಳಲಿಲ್ಲ.

ಅರ್ಧ ಘಂಟೆ ಕಳೆಯಿತು.. ಹಲ್ಲು ಬಿಡುತ್ತಾ ದೇಶಾವರಿ ನಗೆ ಬಿಸಾಕುತ್ತಾ ಬಂದ..

ನಾ ಓಡಿಸ್ಲಾ ಅಂದ..

ಬೇಡ ಗುರು ಸ್ವಲ್ಪ ದೂರ ಓಡಿಸ್ತೀನಿ.. ಆಮೇಲೆ ನೀ ತಗೋ ಅಂದೇ

ಮುಂದಿನ ನಾಲ್ಕು ಘಂಟೆಗಳು.. ಆ ಬಿರು ಬಿಸಿಲಿನಲ್ಲಿ ಹಾಸನದ ಹಾದಿಯಲ್ಲಿ ನಗು, ನಗು ಮಧ್ಯೆ ಕಾಫಿ ತಿಂಡಿಗೆ ವಿರಾಮ.. ಸೊಗಸಾಗಿತ್ತು.

ಹಾಸನದಲ್ಲಿ ಅವನ ಅಣ್ಣನ  (ಗೋಪಾಲ ಮಾವನ ಮನೆ) ಮನೆಗೆ ಹೋಗಿ, ಕಾಫಿ ಕುಡಿದು ಕೂತಿದ್ದೆವು. ರಾಜ ಕಣ್ಣಿನಲ್ಲಿಯೇ ಸನ್ನೆ ಮಾಡಿದ.. "ನೀ ನಿನ್ನ ಕೆಲಸ ಮುಗಿಸಿಕೊಂಡು ಬಾ, ನಾ ಇಲ್ಲೇ ಇರ್ತೀನಿ" ಕಣ್ಣಿನ ಭಾಷೆ ಅರಿವಾಯಿತು.

ಸರಿ ನಾ ಹೊರಟೆ..

(ಇಲ್ಲಿ ಒಂದು ಚಿಕ್ಕ ತಿರುವು..
ನಾ ನನ್ನ ಬ್ಯಾಟರಿ ಚಾರ್ಜರ್ ಶ್ರೀ ನಾಗಭೂಷಣನ ಮನೆಗೆ ಹೋದೆ.. ಅಲ್ಲಿ ಅವನು ಕೆಲವು ವ್ಯಕ್ತಿಗಳ ಜೊತೆಯಲ್ಲಿ ಮಾತಾಡುತ್ತಿದ್ದ, ನಾ ಸುಮಾರು ಒಂದು ಘಂಟೆ ಕಾದೆ.. ಸುಮಾರು ರಾತ್ರಿ ಎಂಟು ಘಂಟೆಗೆ "ಶ್ರೀಕಾಂತಾ ಬಾರೋ " ಅಂದ.

ಒಳಗೆ ಹೋದೆ, ಒಂದಷ್ಟು ಮಾತು.. ನಾ ನನ್ನ ಸಂಕಷ್ಟಗಳನ್ನು ಹೇಳಿಕೊಳ್ಳಲಿಲ್ಲ, ಅವನು ಕೇಳಲಿಲ್ಲ.. ಅದು ಇದು ಮಾತಾಡಿದೆವು, ಮನಸ್ಸನ್ನು ಹೇಗೆ ಗೆಲ್ಲಬೇಕು ಎಂದು ಒಂದೆರಡು ಮಹಾಭಾರತದ ಕಥೆಗಳನ್ನು ಹೇಳಿದ.. ಅರ್ಧಘಂಟೆ ಆಯಿತು.. ಅಷ್ಟರಲ್ಲಿ ಇನ್ನಷ್ಟು ಮಂದಿ ಬಂದರು.. ನಾ ಹೋಗಿಬರುತ್ತೇನೆ ಎಂದು ಹೇಳಿ ಅವನ ಆಶೀರ್ವಾದ ಪಡೆದು ಹೊರಟೆ. )

ಒಂಭತ್ತು ಘಂಟೆ ರಾತ್ರಿ.. ಊಟ ಮಾಡಿ.. ಹೊರಡೋಕೆ ಸಿದ್ಧವಾಗಿದ್ದೆವು.. ಆಗ ರಾಜ.. ಬೆಳಿಗ್ಗೆ ನಾಲ್ಕು ಘಂಟೆಗೆ ಎದ್ದು ಹೋಗೋಣ ಅಂದ..

ಸರಿ.. ಬಿರು ಬಿಸಿಲಿನಲ್ಲಿ ಬೈಕ್ ನಲ್ಲಿ ಬಂದದ್ದು ನಮಗೂ ಆಯಾಸವಾಗಿತ್ತು.. ದೂಸ್ರ ಮಾತಾಡದೆ ನಿದ್ರಾದೇವಿಗೆ ಶರಣಾದೆವು..
"ಲೋ.. ಎದ್ದೇಳೋ..ನಾಲ್ಕು ಘಂಟೆ ಆಯಿತು.. "..

ಸರಿ ಅತ್ತೆ ಮಾಡಿಕೊಟ್ಟ ಬಿಸಿ ಬಿಸಿ ಕಾಫಿ ಕುಡಿದು.. ನಾನು ರಾಜ ಮತ್ತೆ ಬೆಂಗಳೂರಿನ ದಾರಿ ಹಿಡಿದೆವು ಬೈಕ್ ನಲ್ಲಿ.

ಬೆಳಗಿನ ಚಳಿ, ಬಿಸಿ ಬಿಸಿ ಕಾಫಿ ಹೊಟ್ಟೆಯೊಳಗೆ ಹೋಗಿದ್ದು ಸ್ವಲ್ಪ ಸಮಧಾನ ನೀಡಿತ್ತು...

ಮುಂದಿನ ನಾಲ್ಕು ಘಂಟೆಗಳು... ಸುಂದರ ಪಯಣ.. ಬೆಳಗಿನ ಮಂಜು, ಸೂರ್ಯನ ಹಿತಮಿತ ಕಿರಣಗಳು.. ಬೆಳ್ಳೂರು ಕ್ರಾಸ್ ಹತ್ತಿರ ಬಿಸಿ ಬಿಸಿ ಇಡ್ಲಿ ವಡೆ ಕಾಫಿ.. ಆಹಾ.. ಮನಸ್ಸು ಹಕ್ಕಿಯ ಹಾಗೆ ಹಾಗಿತ್ತು..

ತುಮಕೂರು ದಾಸರಹಳ್ಳಿಯ ಹತ್ತಿರ ಅವನನ್ನು ಇಳಿಸಿ.. ನಾ ಸೀದ ಮನೆಗೆ ಬಂದೆ..

ಬೈಕ್ ನಿಲ್ಲಿಸಿದ ತಕ್ಷಣ.. ಮಂಗಳಾರತಿ, ಪ್ರಸಾದ ಎರಡು ಸಿಕ್ಕಿತು ಅಮ್ಮ ಅಪ್ಪ ಮತ್ತು ನನ್ನ ಮಡದಿಯಿಂದ.. ಯಥಾ ಪ್ರಕಾರ ಇರುವ ಒಂದಷ್ಟು ಹಲ್ಲುಗಳನ್ನು ತೋರಿಸಿ.. ರಾಜನ ಜೊತೆ ಹೋಗಿದ್ದೆ ನಾಗಭೂಷಣನ ಮನೆಗೆ ಎಂದೇ..

ಹೇಳಿ ಹೊಗೋದಲ್ವ ಅಂತ ಇನ್ನೊಂದಷ್ಟು ಸಿಕ್ಕಿತು.. ಮತ್ತೆ ದಂತ ಪಂಕ್ತಿಗಳ ಪ್ರದರ್ಶನ.

ಇಲ್ಲಿ ರಾಜನ ಮಗುವಿನಂಥ ಮನಸ್ಸಿನ ಬಗ್ಗೆ ಹೇಳಬೇಕೆಂದರೆ, ಹಿಂದಿನ ದಿನವಷ್ಟೇ ತಿಪಟೂರಿನ ತನಕ ಬೈಕ್ ನಲ್ಲಿ ಹೋಗಿ ಬೆಳಿಗ್ಗೆ ಬರ್ತಾ ಇದ್ದವನು, ನಾ ಹಾಸನಕ್ಕೆ ಹೋಗುತ್ತಿದ್ದೇನೆ ಬಾ ಎಂದಾಗ ಅರೆ ಕ್ಷಣ ಯೋಚನೆ ಮಾಡದೆ.. ಬಂದದ್ದು
ವ್ಯಾವಹಾರಿಕ ಪ್ರಪಂಚದಲ್ಲಿ ತನಗೆ ಏನು ಲಾಭ ಎಂದು ಯೋಚಿಸದೆ ಬರಿ ನನಗೋಸ್ಕರ ಬಂದದ್ದು, ಯಾಕೆ ಎಂದು ಕೇಳದೆ, ನಾ ಹೇಳುವ ತನಕ ಒಂದು ಪ್ರಶ್ನೆ ಕೇಳದೆ ೩೮೦ ಕಿಮಿ ಬೈಕ್ ನಲ್ಲಿ ಬಂದದ್ದು, ತಿಂಡಿ ಊಟಕ್ಕೆ ನಾ ಕೊಡುತ್ತೀನಿ ಎಂದರು.. ಲೇ ಸುಮ್ಮನಿರೋ ನಾ ಕಾಣದ ದುಡ್ಡಾ ಎಂದು ಬಯ್ದು ಸುಮ್ಮನಿರಿಸಿದ.

ಹೀಗೆ ಅವನ ಇಡಿ ವ್ಯಕ್ತಿತ್ವ ಚಿತ್ರಣ ಒಮ್ಮೆಗೆ ಸಿಗಲಾರದು, ಬಿಡಿ ಬಿಡಿಯಾಗಿ ಬಿಡಿಸಿ ನೋಡಿದಾಗ ಹಲಸಿನ ಹಣ್ಣು ಬಿಡಿಸಿ ಹಣ್ಣನ್ನು ತಿಂದ ಅನುಭವ ಸಿಗುತ್ತದೆ.

ಅವನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಅಥವಾ ಅವನ ಮಗುವಿನಂಥಹ ಮನಸ್ಸಿಗೆ ಸಿಗಬೇಕಾದ ಬೆಲೆ ಸಿಗದೇ.. ಈ ಇಹಲೋಕವನ್ನು ಬಿಟ್ಟು ಹೋದ ಎಂಬುದೇ ಸದಾ ನನ್ನ ಮನಸ್ಸಿಗೆ ಬರುವ ಮಾತುಗಳು.

ಮಾನಸ ಸರೋವರದಂತಹ ಅವನ ವ್ಯಕ್ತಿತ್ವ ಇನ್ನೂ ನಮ್ಮ ಜೊತೆ ಇರಬೇಕಿತ್ತು ಎಂದು ಸದಾ ಹಂಬಲಿಸುತ್ತೆ ನನ್ನ ಮನಸ್ಸು.

ಅವನ ಬಗ್ಗೆ ಬರೆಯಬೇಕು ಎನ್ನಿಸಿತು.. ಅವನ ಹುಟ್ಟು ಹಬ್ಬಕ್ಕೆ ಈ ಲೇಖನ ಅರ್ಪಿತ..

ರಾಜ ನಿನ್ನ ಆಶೀರ್ವಾದ ಸದಾ ಇರಲಿ.. ನಮ್ಮ ಎಲ್ಲ ಬಂಧು ವರ್ಗದವರ ಹಾಗೆ, ನಾನು ಸವಿತಾ ಮತ್ತು ಶೀತಲ್ ನಿನ್ನನ್ನು ನೆನೆಯದ ದಿನವಿಲ್ಲ.. ನೀ ನಮ್ಮ ಮನೆ ಮನದಲ್ಲಿ ಸದಾ ನೆಲೆ ನಿಂತಿರುವ ಆತ್ಮ ಬಂಧು..

ಹುಟ್ಟು ಹಬ್ಬದ ಶುಭಾಶಯಗಳು.. ಜೊತೆಯಲ್ಲಿ ನನ್ನ ಸವಿತಾಳ ೧೪ನೆ ವರ್ಷ.. ಜೊತೆಯಾಗಿ ಹೆಜ್ಜೆ ಹಾಕಲು ಶುರುಮಾಡಿ.. ನಿನ್ನ ಆಶೀರ್ವಾದ ಇರಲಿ ತಣ್ಣಗೆ ಸದಾ ನಮ್ಮ ಮೇಲೆ.. 

Wednesday, April 8, 2015

ರಾಜ ಬಾರೋ ಬಾರೋ ....!

"ಶ್ರೀಕಾಂತೂ ಶ್ರೀಕಾಂತೂ.. "

ಕಣ್ಣು ಬಿಟ್ಟೆ ಎದುರಿಗೆ ಕೂತಿದ್ದ.. ದೇಶಾವಾರಿ ಹಲ್ಲು ಬಿಡುತ್ತಾ ಗಹಗಹಿಸಿ ನಗುತ್ತಿದ್ದ.. 

ಅವನ ಟ್ರೇಡ್ ಮಾರ್ಕ್ ನಗು.. ನಾವೆಲ್ಲಾ ಏನಲೇ ಒಳ್ಳೆ ತೂಗುದೀಪ ಶ್ರೀನಿವಾಸ ತರಹ ನಗ್ತೀಯ ಅಂತಾ ಯಾವಾಗಲೂ ತಮಾಷೆ ಮಾಡುತ್ತಲೇ ಇದ್ದೆವು. 

ಇವನೇ ಇವನೇ ರಾಜ ನನ್ನ ಪ್ರೀತಿಯ ಸೋದರಮಾವ.. ಒಂದು ರೀತಿಯಲ್ಲಿ ನಮ್ಮ ಮನೆಯಲ್ಲಿ ಅಗ್ರಜನ ಸ್ಥಾನ ಇವನಿಗೆ ಮೀಸಲಿತ್ತು. 

ನಮ್ಮ ಮನೆಯ ಯಾವ ಸಮಾರಂಭವೂ ಇವನಿಲ್ಲದೆ ಪೂರ್ಣ ಎನಿಸುತ್ತಲಿರಲಿಲ್ಲ. ಇಂದಿಗೂ ಕೂಡ ನಮ್ಮ ಮನೆಯ ಪ್ರತಿ ಸಂಭ್ರಮದಲ್ಲೂ ಅಥವಾ ಬೇರೆ ರೀತಿಯ ವಿಷಯಗಳಲ್ಲಿಯೂ ಇವನ ಪ್ರಸ್ತಾಪವಿಲ್ಲದೆ ಮಾತಿಲ್ಲ ಕಥೆಯಿಲ್ಲ. ಅಷ್ಟರ ಮಟ್ಟಿಗೆ ನಮ್ಮ ಮನೆಯಲ್ಲಿ ಬೆರೆತು ಹೋಗಿದ್ದಾನೆ. 

ನನ್ನ ಎಲ್ಲಾ ಕರೆಗಳಿಗೂ ಇವನ ಉತ್ತರ "ನಡೆಯೋ ನಾ ಇದ್ದೀನಿ.. ನಾ ಬರ್ತೀನಿ.. ಹೋಗಲೋ ನನ್ನ ಬಿಟ್ಟು ಹೋಗ್ತೀಯೇನೋ.. " ಅವನು ನನ್ನ ಜೊತೆಯಲ್ಲಿದ್ದಾನೆ ಅಂದರೆ ನನಗೆ ನೂರಾನೆ ಜೊತೆಯಲ್ಲಿದ್ದಂತೆ ಭಾಸವಾಗುತ್ತಿತ್ತು. 

**************

ಒಮ್ಮೆ ತುಮಕೂರು ಬಳಿಯ ಶಿವಗಂಗೆ ಬೆಟ್ಟಕ್ಕೆ ಬೈಕ್ ನಲ್ಲಿ ನಮ್ಮ ಮನೆಯವರೆಲ್ಲರೂ ಹೋಗುವುದೆಂದು ತೀರ್ಮಾನವಾಯಿತು. ಸರಿ ನನ್ನ ಬೈಕ್, ಅಣ್ಣನ ಬೈಕ್ ಮತ್ತು ತಮ್ಮನ ಬೈಕ್ ಸಿದ್ಧವಾಯಿತು. ಮೂರು ಗಾಡಿ ಮೂರು ಜೋಡಿ, ಜೊತೆಯಲ್ಲಿ ಅಣ್ಣನ ಮಗಳು ಮತ್ತು ನನ್ನ ಮಗಳು (ತೀರ ಚಿಕ್ಕದು ಸುಮಾರು ಒಂದೂವರೆ ವರ್ಷದ ಕೂಸು). ಅಕ್ಕ ಮತ್ತು ಅಕ್ಕನ ಮಗ ಜಾಲಹಳ್ಳಿ ಕ್ರಾಸ್ ನಲ್ಲಿಯೇ ಅನಾರೋಗ್ಯದ ಪರಿಣಾಮ ವಾಪಸ್ ಹೋಗಿಬಿಟ್ಟರು. ನಾವೆಲ್ಲಾ ಸರಿ ಮುಂದುವರೆಸೋಣ ಎಂದು ಹೊರಟೆ ಬಿಟ್ಟೆವು.. 

ಶಿವಗಂಗೆ ತಲುಪಿ.. ಶಿವನಿಗೆ ನಮಸ್ಕರಿಸಿದಾಗ ಆಗಲೇ ಮಧ್ಯಾಹ್ನ ಒಂದೂವರೆ ಆಗಿತ್ತು.. ತೆಗೆದುಕೊಂಡು ಹೋಗಿದ್ದ ಊಟ ಬುತ್ತಿಯನ್ನು ಅಲ್ಲೇ ಬಿಚ್ಚಿ ಎಲ್ಲರೂ ಮುಗಿಸಿದ್ದಾಯಿತು. ಶಿವನಿಗೆ ಅರ್ಪಿಸಲೆಂದು ತಂದಿದ್ದ ತೆಂಗಿನಕಾಯಿ, ಬಾಳೆಹಣ್ಣು ಮರೆತು ನಮ್ಮ ಚೀಲದಲ್ಲಿಯೇ ಉಳಿದಿತ್ತು. 

ಮುಂದೆ ಒಳಕಲ್ ತೀರ್ಥದ ಹತ್ತಿರ ಬಂದು ನಮ್ಮ ನಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದು ಆಯ್ತು. ಅಷ್ಟರಲ್ಲಿ ಸುಮಾರು ಮೂರು ಘಂಟೆ ಆಗಿತ್ತು.. ಮುಂದೆ ಸುಮಾರು ಇನ್ನೆರಡು ಅಥವಾ ಮೂರು ಗಂಟೆಗಳ ಕಾಲ ಹತ್ತಿದ್ದರೆ ಶಿವಗಂಗೆಯ ತುತ್ತ ತುದಿಯಲ್ಲಿ ಇರುತ್ತಿದ್ದೆವು.. ಆದರೆ ಹತ್ತುವುದೋ ಇಳಿಯುವುದೋ ಎಂಬ ಗೊಂದಲ ಶುರುವಾಯಿತು. ಕಡೆಗೆ ಇಳಿಯುವುದೇ ಸರಿ ಎಂಬ ತೀರ್ಮಾನಕ್ಕೆ ಬಂದೆವು... 

ನಿಧಾನವಾಗಿ ಅದು ಇದು ಹರಟುತ್ತಾ ಒಬ್ಬೊಬ್ಬರಾಗಿ ಇಳಿಯಲು ಶುರುಮಾಡಿದೆವು.. ಶಿವಗಂಗೆ ಬೆಟ್ಟದ ಬುಡದಲ್ಲಿ ಒಂದು ಬೃಹದಾಕಾರ ಗಣಪನ ಕೆತ್ತನೆ ಇರುವ ಶಿಲ್ಪವಿತ್ತು. 
ಶಿವಗಂಗೆ ಬೆಟ್ಟದ ಬುಡದಲ್ಲಿರುವ ಗಣಪ..
ಇಲ್ಲಿಯೇ ನಮ್ಮ ರಾಜ ಪೂಜೆ ಮಾಡಿದ್ದು 

ನಾವೆಲ್ಲಾ "ಲೋ ರಾಜ (ನಮ್ಮ ಸೋದರಮಾವನಿಗೆ ನಾವು ಮರ್ಯಾದೆ ಕೊಡುತ್ತಿದ್ದ ರೀತಿ :-) ..... ! ) ಹೇಗಿದ್ದರೂ ಹಣ್ಣು ಕಾಯಿ ಇದೆ ಒಂದು ಲೈಟ್ ಆಗಿ ಪೂಜೆ ಮಾಡಿಯೇ ಬಿಡೋ ಅಂದೆವು.. 

ಅವನಿಗೆ ಮೂರು ವಸ್ತುಗಳ ಮೇಲೆ ಅಪಾರ ವ್ಯಾಮೋಹ.. ಪೂಜೆ, ಕನ್ನಡ ಮತ್ತು ಹಿಂದಿಯ ಹಳೆಯ ಚಿತ್ರಗಳು ಮತ್ತು ಚಿತ್ರಾನ್ನ.  ಇವು ಮೂರು ಇದ್ದರೆ ಅವನಿಗೆ ಮೂರು ಲೋಕಗಳು ಇದ್ದ ಹಾಗೆ. 

ಸರಿ ತನಗೆ ಗೊತ್ತಿದ್ದ ಎಲ್ಲಾ ಮಂತ್ರಗಳನ್ನು ಹೇಳಿ ಅಚ್ಚುಕಟ್ಟಾಗಿ .. ಗಣಪನೆ ತಲೆದೂಗುವಂತೆ ಪೂಜೆ ಮಾಡಿದ. ಹಣ್ಣು ಕಾಯಿ ನೈವೇದ್ಯ ಮಾಡಿ... ಚೆನ್ನಾಗಿ ಮಳೆ ಸುರಿಸಪ್ಪ ಎಂದಾ.. 

ನಾವೆಲ್ಲಾ ಜೋರಾಗಿ ನಕ್ಕೆವು.. ಅವನ ಬೆನ್ನಿನ ಮೇಲೆ ನಮ್ಮೆಲ್ಲರ ಪ್ರೀತಿಯನ್ನು ತೋರಿಸಿದೆವು.. 

ಆ ಕ್ಷಣದಲ್ಲಿ ಮಳೆ ಬರುವ ಯಾವುದೇ ಸೂಚನೆ ಕೂಡ ಇರಲ್ಲಿಲ್ಲ.. ಸ್ವಚ್ಛ ಆಗಸ ಅಲ್ಲಿ ಇಲ್ಲಿ ಕನ್ನಡದ ಡಬ್ಬ ಚಿತ್ರಗಳಿಗೆ ಚಿತ್ರಮಂದಿರದಲ್ಲಿ ಇರುವ ಪ್ರೇಕ್ಷಕರ ಹಾಗೆ ಮೋಡಗಳು ಚದುರಿದ್ದವು.. ಹವಾಮಾನ ಇಲಾಖೆ ಕೂಡ ಮಳೆ ಬರೋಲ್ಲ ಅಂತ ಎದೆ ತಟ್ಟಿಕೊಂಡು ಹೇಳಬಹುದಾದ ರೀತಿ ಇತ್ತು ಅಂದಿನ ಪರಿಸ್ಥಿತಿ. 

ಶಿವಗಂಗೆಯಿಂದ ದಾಬಸಪೇಟೆಗೆ ಬಂದೆವು.. ಅಣ್ಣನ ಗಾಡಿಯಲ್ಲಿ ಪೆಟ್ರೋಲ್ ಸಮಸ್ಯೆ ತಲೆದೋರಿತ್ತು.. ಸರಿ ತಮ್ಮನ ಗಾಡಿಯಿಂದ ಸ್ವಲ್ಪ ಮಟ್ಟಿಗೆ ಪೆಟ್ರೋಲ್ ಬಗ್ಗಿಸಿ ಮತ್ತೆ ಹೊರಟೆವು.. ಕೇವಲ ಮೂರು ನಾಲ್ಕು ಕಿ ಮೀ ಗಳು ಬಂದಿದ್ದವು ಅಷ್ಟೇ.. ಶುರುವಾಯ್ತು ಗುಡುಗು ಮಿಂಚು ಸಿಡಿಲಿನ ಮಳೆ.. 


ಶಿವಗಂಗೆ ಪ್ರವಾಸದಲ್ಲಿ ನೆಂದು ನಾಯಿಯಾಗಿದ್ದ ನಮಗೆ ಆಶ್ರಯ ನೀಡಿದ ತಂಗುದಾಣ 

ಅಲ್ಲೇ ಇದ್ದ ಒಂದು ಚಿಕ್ಕ ತಂಗುದಾಣದಲ್ಲಿ ನಿಂತೆವು.. ಎರಡು ಚಿಕ್ಕ ಚಿಕ್ಕ ಮಕ್ಕಳು ಒಂದಕ್ಕೆ ಸುಮಾರು ನಾಲ್ಕೈದು ವರ್ಷ, ಇನ್ನೊಂದಕ್ಕೆ ಒಂದೂವರೆ ವರ್ಷ, ನಡುಗುತ್ತ ಬೆದರುತ್ತಾ ಮಳೆಯಲ್ಲಿ ನಿಂತೆವು. 

ಅಣ್ಣನ ಗಾಡಿಯಲ್ಲಿ ಪೆಟ್ರೋಲ್  ಖಾಲಿ ಆಗಿತ್ತು. ರಾಜ ಮತ್ತು ತಮ್ಮ ಮುರುಳಿ ಪೆಟ್ರೋಲ್ ತರಲು ನೆಲಮಂಗಲದ ಹತ್ತಿರ ಹೋದರು. ನಮಗೆಲ್ಲ ಹೊಟ್ಟೆ ಹಸಿವು. ಜೊತೆಯಲ್ಲಿ ಕಂದಮ್ಮಗಳು ಚಳಿಗೆ ಮತ್ತು ಹಸಿವಿಗೆ ತೋಡಿ ರಾಗ ಶುರುಮಾಡಿದ್ದವು. ಅಲ್ಲಿಯೇ ಇದ್ದ ಒಂದು ಪೆಟ್ಟಿಗೆ ಅಂಗಡಿಯಲ್ಲಿ ಬಿಸ್ಕತ್ ತಂದು ತಿಂದೆವು.  ಬೇರೆ ದಾರಿ ಕಾಣಲಿಲ್ಲ, ಜೊತೆಯಲ್ಲಿ ಮಳೆಯೂ ಕೂಡ ಕಡಿಮೆ ಆಗುವ ಯಾವ ಲಕ್ಷಣಗಳನ್ನು ತೋರಲಿಲ್ಲ.. 

ಸುಮಾರು ಎಂಟು ಘಂಟೆಗೆ ಅಲ್ಲಿಂದ ಮಳೆಯಲ್ಲಿಯೇ ಹೊರಟೆವು.. ಮುಂದಿನ ಸುಮಾರು ಎರಡು ಘಂಟೆಗಳು ಮಳೆಯಲ್ಲಿ ನೆಂದ ನಾಯಿಯಾಗಿದ್ದೆವು. ಮಕ್ಕಳನ್ನು ಎದೆಗೆ ಅವುಚಿಕೊಂಡು ಹಾಕಿಕೊಂಡಿದ್ದ ಜರ್ಕಿನ್, ಮತ್ತು ದುಪ್ಪಟ್ಟಗಳಿಂದ ಸುತ್ತಿಕೊಂಡು ಗಡ ಗಡ ನಡುಗುತ್ತಲೇ ಆ ಗುಡುಗು ಸಿಡಿಲು ಮಳೆಯಲ್ಲಿ ನೆನೆಯುತ್ತಾ ವಿಜಯನಗರದ ಮನೆ ಸೇರಿದಾಗ ಸುಸ್ತೋ ಸುಸ್ತೋ... 

ಅಮ್ಮ ಬೇಗನೆ ಬಿಸಿ ಬಿಸಿ ಅಡಿಗೆ ಮಾಡಿದರು.. ಅದಕ್ಕೆ ಮುಂಚೆ ನಮಗೆ ತ್ರಾಣ ನೀಡಿದ ಬಿಸಿ ಬಿಸಿ (ನನಗೆ ಮಾತ್ರ ತಣ್ಣನೆ) ಕಾಫಿ ಕುಡಿದು.. ರಾಜನ ಕಡೆ ವಕ್ರ ದೃಷ್ಟಿ ಬೀರಿದೆವು.. 

ಅವನು ಉಹಾ ಉಹಾ ಹ ಹಃ   ಹ ಹಃ.. ಎಂದು ನಗಲು ಶುರುಮಾಡಿದ.. 

"ಮಗನೆ ಎಂಥ ಸುಡುಗಾಡು ಬಾಯಿ ನಿಂದು.. ನಿನಗೆ ಪೂಜೆ ಮಾಡು ಅಂತ ಹೇಳಿದೆವು.. ಮಳೆ ಬರಿಸಪ್ಪ ಅದರಲ್ಲೂ ಚೆನ್ನಾಗಿ ಮಳೆ ಬರಿಸಪ್ಪ ಅಂತ ಯಾಕಲೇ ಬೇಡಿಕೊಂಡೆ" ಎಂದು ಬಾಯಿಗೆ ಬಂದಂತೆ ಬಯ್ದೆವು.. ಜೊತೆಯಲ್ಲಿ ನಗುತ್ತಲೇ ಇದ್ದೆವು.. 

ಅಂಥಹ ಮಗುವಿನಂಥ ಮನಸು ಅವನದು.. ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅಣ್ಣಾವ್ರು ಭೋಜನಿಗೆ ಹೇಳುತ್ತಾರೆ "ಪ್ರಭು ನಿಮ್ಮ ಮನಸ್ಸು ಸ್ಪಟಿಕ ತರಹ" ಎಂದು ಹಾಗೆಯೇ ಈ ನಮ್ಮ ರಾಜನದು ಹಾಗೆಯೇ.. ಕಲ್ಮಶವನ್ನು ಹುಡುಕಿದರೂ ಸಿಗುತ್ತಲಿರಲ್ಲಿಲ್ಲ. 

"ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ" ಎಂಬ ಅಣ್ಣಾವ್ರ ಹಾಲು ಜೇನು ಚಿತ್ರದ ಹಾಡಿನಂತೆ .. ಇಂದು ನಿನ್ನ ಜನುಮ ದಿನ.. ಜೊತೆಯಲ್ಲಿ ನನ್ನ ವಿವಾಹ ದಿನೋತ್ಸವ ಕೂಡ.. ನೀನಿಲ್ಲದೆ ಕಳೆದ ವರ್ಷಗಳು ಏಳು ಆಗಿದ್ದರೂ ನೀನು ಏಳೇಳು ಜನ್ಮದ ಬಂಧು.. ಮುಂದಿನ ಜನ್ಮ ಎನ್ನುವುದು ಇದ್ದರೆ.. ನಾನು ನೀನು ಹೀಗೆ ಮಾವ ಅಳಿಯನ ಹಾಗೆ ಹುಟ್ಟೋಣ.. 

ಜನುಮದಿನದ ಶುಭಾಶಯಗಳು ಕಣೋ.. ಭೂಮಿಗೆ ಬಂದ ಭಗವಂತ ಚಿತ್ರದ ಹಾಡಿನಂತೆ "ನಾ ಇಲ್ಲದೆಡೆಯಿಲ್ಲ ನಾ ಇಲ್ಲದೆ ಏನಿಲ್ಲ ನಾನು ನಾನೆಂಬ ಅಜ್ಞಾನಿಗೆ ನಾನಿಲ್ಲ ನಾನಿಲ್ಲ" ಹಾಡನ್ನು ನಿನಗೆ ಮತ್ತು ನಿನ್ನ ಬದುಕಿಗೆ ಹೋಲಿಸಿದರೆ.. 
"ರಾಜ ನೀ ಇಲ್ಲದೆಡೆಯಿಲ್ಲ ನೀ ಇಲ್ಲದೆ ಏನಿಲ್ಲ.. ನಿನ್ನ ನೆನಪಿಲ್ಲದ ದಿನವಿಲ್ಲ ಕ್ಷಣವಿಲ್ಲ.. " ಎಂದು ಹಾಡಬೇಕೆನಿಸುತ್ತದೆ... 

ನಿನ್ನ ಸುಂದರ ಮನಸ್ಸಿನ ಚರಣ ಕಮಲಗಳಿಗೆ ಈ ಲೇಖನ ಅರ್ಪಿತ.. 

ನಿನ್ನ ನೆನಪಲ್ಲಿ ನೀ ಇಷ್ಟಪಡುತ್ತಿದ್ದ ನನ್ನ ಇಡಿ ಪರಿವಾರ, ನಾವು ಶಿವಗಂಗೆಯಿಂದ ವಾಪಸ್ ಬರುವಾಗ ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ನಿಂತಿದ್ದ ಜಾಗದಲ್ಲಿ, ನಿನ್ನ ನೆನಪಲ್ಲಿ ನಿಂತು ತೆಗೆಸಿಕೊಂಡ ಚಿತ್ರ ನಿನಗಾಗಿ ನಿನಗೋಸ್ಕರ.. 
ನಮ್ಮ ಕುಟುಂಬ ಆ ಸವಿನೆನಪನ್ನು ಮೆಲುಕು ಹಾಕಲು ಆ ತಂಗುದಾಣದಲ್ಲಿ ತೆಗೆಸಿಕೊಂಡ ಚಿತ್ರ
ರಾಜನ ನಿನ್ನ ಸವಿನೆನಪಿಗೆ!!  

ರಾಜ ಬಾರೋ ಬಾರೋ ಮತ್ತೊಮ್ಮೆ ಮಗದೊಮ್ಮೆ.. ಈ ಭಾಷ್ಪಂಜಲಿ ನಿನ್ನ ಸುಂದರ ಮನಸ್ಸಿಗೆ.. !!!
ಭದ್ರಾವತಿಯ ನರಸಿಂಹ ದೇವಾಲಯದ ಸನ್ನಿಧಿಯಲ್ಲಿ ..
ರಾಜ, ನನ್ನ ಅಕ್ಕ, ಅಕ್ಕನ ಮಗ, ಮಡದಿ ಮತ್ತು ಗೆಳತಿ ಜೊತೆಯಲ್ಲಿ 

Wednesday, April 2, 2014

ರಾಜ.... ಶಂಖದ ದೇವರ ಭಟ್ಟರ ವಂಶದ ರಾಜಕುಮಾರ

ನನ್ನ ಹೆಸರೇ ಅವನ ಹೆಸರು...  ಆದರೂ ಅವನು ಚಿರಪರಿಚಿತನಾಗಿದ್ದು ರಾಜ ಎನ್ನುವ ನಾಮದೇಯದಿಂದ...ನನ್ನ ಮತ್ತು ಅವನ ಅಭಿರುಚಿಗಳು.. ರುಚಿಗಳು.. ಎಲ್ಲವೂ ಒಂದು ಬಿಂಬ ಮತ್ತು ಪ್ರತಿಬಿಂಬದಂತಿತ್ತು.. ಅದಕ್ಕೆ ಬ್ಲಾಗ್ ಶೀರ್ಷಿಕೆ ಕೂಡ ಹಾಗೆಯೇ ಮಾಡಿದ್ದೇನೆ.. 

ಅವನನ್ನು ಹಲವಾರು ಮಂದಿ ಒಬ್ಬ ತಮಾಷೆಯ  ವಸ್ತುವನ್ನಾಗಿ ನೋಡಿದ್ದೇ ಹೆಚ್ಚು.. ಆದರೆ ಅವನಲ್ಲಿ ಅಡಗಿದ್ದ.. ವಿಶ್ವಾಸ, ಪ್ರೀತಿ ಮಕ್ಕಳನ್ನು ಕಂಡರೆ.. ಪ್ರೀತಿ.. ಚಲನಚಿತ್ರಗಳ ಬಗ್ಗೆ ಇದ್ದ ಅಪರಿಮಿತ ಪ್ರೀತಿ.. 

ನನ್ನ ಮತ್ತು ಅವನ ನಡುವೆ ಇದ್ದ ಪ್ರತಿ ಘಟನೆಗಳನ್ನು ಈ ವ್ಯಾವಹಾರಿಕ ಪ್ರಪಂಚದ ಮುಂದೆ ತೆರೆದು ಇಡಬೇಕು.. ಬರಿ ಹಣ.. ವಸ್ತು.. ಅಧಿಕಾರ ಇವುಗಳಿಂದ ಮನುಷ್ಯನಾಗುವುದಿಲ್ಲ ಬದಲಿಗೆ ಅಂತಃಕರಣ ಇರಬೇಕು.. ಮಮತೆ ಪ್ರೀತಿ ವಿಶ್ವಾಸ ಇರಬೇಕು ಎನ್ನುವ ತತ್ವ ಉಳ್ಳವನು ಅವನು.. 

ಎದೆ ತಟ್ಟಿ ಹೇಳಿಕೊಳ್ಳುತ್ತೇನೆ ಇಂತಹ ಒಂದು ಸುಂದರ ಮಾನವ ಜೀವಿಯ ಜೊತೆ ನನ್ನ ಹೆಸರು ಇರುವುದು ನನಗೆ ಸಿಕ್ಕ ಭಾಗ್ಯ ಎಂದು.. 

ಅವನ ಇರುವಿಕೆ ಇಲ್ಲದೆ ನಮ್ಮ ನೆಂಟರಿಷ್ಟರ ಯಾವುದೇ ಸಮಾರಂಭ ಕಳೆ ಕಟ್ಟುತ್ತಿರಲಿಲ್ಲ.. ಅವನು ಎಷ್ಟರ ಮಟ್ಟಿಗೆ ನಮ್ಮೊಡನೆ ಬೆರೆತಿದ್ದ ಅಂದರೆ.. ಅವನ ವೈಕುಂಠ ಸಮಾರಾಧನೆ ದಿನ.. ಅಯ್ಯೋ ರಾಜ ಒಬ್ಬ ಬಂದಿಲ್ಲ ಎಂದು ಅವನನ್ನು ಸುತ್ತ ಮುತ್ತಲು ಹುಡುಕುತ್ತಿತ್ತು ನನ್ನ ಕಂಗಳು... 

ರಾಜ.. ಬಾ.. ಅಕ್ಷರ ಅಕ್ಷರವಾಗಿ ನನ್ನ ಹೃದಯದಿಂದ ಹೊರಗೆ ಬಾ.. ನಿನಗಾಗಿ ನಿನ್ನ ನೆನಪುಗಳು.. 
...............................
...............................

ಸಾಕು ಕಣ್ಣುಗಳು ತುಂಬಿ ಬರುತ್ತಿವೆ.. 

ಮೊದಲ ಬಾರಿಗೆ ಕಂಗಳು ತುಂಬಿ ಬರುತ್ತಿವೆ... 

ಶ್ರೀಕಾಂತ್ ಮತ್ತು ಶ್ರೀಕಾಂತ್!!!!